ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಕಹಿ, 4 ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ: ಸಮೀಕ್ಷೆ

Last Updated 3 ಸೆಪ್ಟೆಂಬರ್ 2021, 16:45 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಐದು ವಿಧಾನಸಭಾ ಚುನಾವಣೆಗಳ ಕುರಿತಾದ ಸಮೀಕ್ಷೆಯಲ್ಲಿ ವಿಪಕ್ಷ ಕಾಂಗ್ರೆಸ್‌ಗೆ ಮತ್ತೆ ಕಹಿ ಸುದ್ದಿ ಬಂದಿದೆ.

ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಅತಂತ್ರ ವಿಧಾನಸಭೆ ಏರ್ಪಡುವ ಸಾಧ್ಯತೆ ಇದ್ದು, ಎಎಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಎಬಿಪಿ-ಸಿ ವೋಟರ್ ಸಮೀಕ್ಷೆ ಹೇಳಿದೆ. ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಗೋವಾದಲ್ಲಿ ಕಾಂಗ್ರೆಸ್‌ಗೆ ಮೂರನೇ ಸ್ಥಾನ ಸಿಗುವ ಸಾಧ್ಯತೆ ಇದ್ದು, ಪಂಜಾಬ್‌ನಲ್ಲಿ ಎಎಪಿಗಿಂತಲೂ ಕಡಿಮೆ ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ನಿರಾಯಾಸವಾಗಿ ಅಧಿಕಾರಕ್ಕೆ ಮರಳುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ, 2017ರ ಚುನಾವಣೆಯಲ್ಲಿ 312 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಸುಮಾರು 50 ಸ್ಥಾನಗಳನ್ನು ಕಳೆದುಕೊಳ್ಳಬಹುದು. ಕಳೆದ ವರ್ಷ 47 ಸ್ಥಾನ ಗೆದ್ದಿದ್ದ ಸಮಾಜವಾದಿ ಪಕ್ಷವು ತನ್ನ ಸ್ಥಾನಗಳನ್ನು ದ್ವಿಗುಣಗೊಳಿಸಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿ 259-267 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಅಂದಾಜಿಸಿದೆ. ಎಸ್‌ಪಿ 109-117 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಸಮೀಕ್ಷೆ ಹೇಳಿದೆ.

2017ರಲ್ಲಿ 19 ಸ್ಥಾನ ಗೆದ್ದಿದ್ದ ಬಿಎಸ್‌ಪಿ ಈ ಬಾರಿ 12–16 ಸ್ಥಾನ, ಕಳೆದ ಬಾರಿ 7 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 3–7 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ.

117 ಸ್ಥಾನಗಳ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 51-57 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆ ಮಾಡಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಆಂತರಿಕ ಕಲಹವನ್ನು ಎದುರಿಸುತ್ತಿರುವ ಕಾಂಗ್ರೆಸ್, 2017ರ ಚುನಾವಣೆಯಲ್ಲಿ ಈಗಿರುವ 77 ಸ್ಥಾನಗಳಿಂದ 38-46 ಸ್ಥಾನಗಳಿಗೆ ಇಳಿದು ಎರಡನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ಇದೆ. ಅಕಾಲಿಕ ದಳವು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು (16- 24 ಸ್ಥಾನಗಳು) ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್‌ಗೆ ನಿರಾಸೆಯಾಗುವ ಸಾಧ್ಯತೆ ಇದ್ದು, ಎರಡನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದಿದೆ.

70 ಸ್ಥಾನಗಳ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಬಿಜೆಪಿ 44-48 ಸ್ಥಾನಗಳನ್ನು (2017 ರಲ್ಲಿ 57), ಕಾಂಗ್ರೆಸ್ 19-23 ಸ್ಥಾನಗಳನ್ನು (2017 ರಲ್ಲಿ 11) ಗೆಲ್ಲುವ ಸಾಧ್ಯತೆಯಿದೆ. ಎಎಪಿ ನಾಲ್ಕು, ಇತರರು ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದಿದೆ.

40 ಸ್ಥಾನಗಳ ಗೋವಾ ವಿಧಾನಸಭೆಯಲ್ಲಿ 22-26 ಸ್ಥಾನಗಳನ್ನುಪಡೆಯುವ ಮೂಲಕ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಬಹುದು. ನಂತರದ ಸ್ಥಾನದಲ್ಲಿ ಎಎಪಿ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ (3-7 ಸ್ಥಾನಗಳು) ತಳಲ್ಪಡುವ ಸಾಧ್ಯತೆ ಇದೆ.

ಮಣಿಪುರಲ್ಲಿ ಬಿಜೆಪಿ ಈ ಬಾರಿ 32-36 ಸ್ಥಾನಗಳನ್ನು ಗೆದ್ದು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು ಎನ್ನುತ್ತಿದೆ ಸಮೀಕ್ಷೆ. ಕಾಂಗ್ರೆಸ್ 18-22 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಮತ್ತು ಎನ್‌ಆರ್‌ಎಫ್ 2-6 ಮತ್ತು ಇತರರು 0-4 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಎಬಿಪಿ–ಸಿವೋಟರ್ ಸಮೀಕ್ಷೆ

ಉತ್ತರ ಪ್ರದೇಶ (403 ಸ್ಥಾನ)

ಬಿಜೆಪಿ -- 259-267
ಎಸ್ಪಿ -- 109-117
ಬಿಎಸ್‌ಪಿ -- 12–16
ಕಾಂಗ್ರೆಸ್ -- 3-7
ಇತರರು -- 6-10

ಪಂಜಾಬ್ (117 ಸ್ಥಾನ)

ಎಎಪಿ -- 51-57
ಕಾಂಗ್ರೆಸ್ -- 38-46
ಅಕಾಳಿ ದಳ - 16-24

ಉತ್ತರಾಖಂಡ (70 ಸ್ಥಾನ)

ಬಿಜೆಪಿ -- 44-48
ಕಾಂಗ್ರೆಸ್ -- 19-23
ಎಎಪಿ - 0-4
ಇತರರು - 0-2

ಗೋವಾ (40 ಸ್ಥಾನ)

ಬಿಜೆ‍ಪಿ -- 22-26
ಎಎಪಿ -- 4-8
ಕಾಂಗ್ರೆಸ್ -- 3-7
ಇತರರು - 3-7

ಮಣಿಪುರ (60 ಸ್ಥಾನ)

ಬಿಜೆಪಿ -- 32-36
ಕಾಂಗ್ರೆಸ್ -- 18-22
ಎನ್‌ಪಿಎಲ್ - 2-6
ಇತರರು - 0-4

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT