ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತುಗೊಂಡ ಸಂಸದರು ಗಾಂಧಿ ಪ್ರತಿಮೆ ಎದುರು ಮಾಂಸ ಸೇವಿಸಿದ್ದಾರೆ: ಬಿಜೆಪಿ

ಅಕ್ಷರ ಗಾತ್ರ

ನವದೆಹಲಿ: ಅಮಾನತುಗೊಂಡಿರುವ ಪ್ರತಿಪಕ್ಷಗಳ ಸಂಸದರು ಸಂಸತ್‌ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಗೆ ಕುಳಿತು, ಮಾಂಸ (ತಂದೂರಿ ಚಿಕನ್‌) ಸೇವಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಪ್ರತಿಭಟನಾ ನಿರತ ಸಂಸದರು ನಿರಾಕರಿಸಿದ್ದಾರೆ. ಅಲ್ಲದೆ, ಆಹಾರದ ವಿಚಾರಕ್ಕೆ ತಲೆ ಹಾಕದಂತೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಮತ್ತು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ ರಾಜ್ಯಸಭೆಯ 20 ಸದಸ್ಯರು ಮತ್ತು ಲೋಕಸಭೆಯ ನಾಲ್ವರು ಸದಸ್ಯರು ಸೇರಿ ಪ್ರತಿಪಕ್ಷಗಳ ಒಟ್ಟು 24 ಸಂಸದರನ್ನು ಕಲಾಪದಿಂದ ವಾರದ ಅವಧಿಗೆ ಮಂಗಳವಾರ ಅಮಾನತುಗೊಳಿಸಲಾಯಿತು.

ಅಮಾನತು ಹಿಂಪಡೆಯಬೇಕಾಗಿ ಆಗ್ರಹಿಸಿ ಸಂಸದರು ಸಂಸತ್‌ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿಯ ವಕ್ತಾರ, ಶೆಹಜಾದ್‌ ಪೂನಾವಾಲ, ‘ಮಾಧ್ಯಮ ವರದಿಗಳ ಪ್ರಕಾರ, ಸಂಸತ್ತಿನ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸುತ್ತಿರುವ ಅಮಾನತುಗೊಂಡ ಕೆಲವು ಸಂಸದರು 'ತಂದೂರಿ ಚಿಕನ್' ಸೇವಿಸಿದ್ದಾರೆ. ಗಾಂಧೀಜಿ ಪ್ರಾಣಿ ಹತ್ಯೆಯ ವಿರುದ್ಧವಾಗಿ ದೃಢ ಅಭಿಪ್ರಾಯ ಹೊಂದಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಇದು ಪ್ರತಿಭಟನೆಯೋ, ಪ್ರಹಸನವೋ, ವಿಹಾರವೋ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ’ ಎಂದು ಹೇಳಿದರು.

ಈ ಆರೋಪವನ್ನು ನಿರಾಕರಿಸಿರುವ ಅಮಾನತುಗೊಂಡಿರುವ ಟಿಎಂಸಿ ಸಂಸದೆ ಸುಶ್ಮಿತಾ ದೇವ್‌, ‘ಆರೋಪ ಸುಳ್ಳು. ಹಣದುಬ್ಬರದಿಂದಾಗಿ ಸರ್ಕಾರ, ನಾಯಕರು ಮತ್ತು ಮಂತ್ರಿಗಳು ಕುಖ್ಯಾತಿಗೀಡಾಗಿದ್ದಾರೆ. ಅವರ ಬಳಿ ಈಗ ಉತ್ತರವಿಲ್ಲ. ಹಾಗಾಗಿ ಈ ಅಪಪ್ರಚಾರ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನವರು ಮತ್ತು ಸಚಿವರು ಮುಚ್ಚಿದ ಬಾಗಿಲಿನ ಹಿಂದೆ ಎಲ್ಲವನ್ನೂ ತಿನ್ನುತ್ತಾರೆ. ಹಾಗಾಗಿ, ನಮ್ಮ ಆಹಾರದ ಬಗ್ಗೆ ಮಾತನಾಡುವುದು ಬೇಕಿಲ್ಲ’ ಎಂದಿದ್ದಾರೆ.

‘ನಮ್ಮ ಮನೆಯಿಂದ ಊಟ ತರಿಸದೇ ಬೇರೆ ಸಂಸದರಿಂದ ತರಿಸುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ಅವರು ನಮ್ಮ ಒಗ್ಗಟ್ಟು ಕಂಡು ಹೆದರಿದ್ದಾರೆ. ಬಿಜೆಪಿ-ಆರ್‌ಎಸ್‌ಎಸ್ ಹೊರಗೆ ಏನು ಹೇಳುತ್ತದೆ ಮತ್ತು ಖಾಸಗಿಯಾಗಿ ಏನು ಮಾಡುತ್ತದೆ ಎಂಬುದು ನಮಗೆ ತಿಳಿದಿದೆ’ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸದರ ಅಮಾನತು ಹಿಂಪಡೆಯಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಆದರೆ, ವಿರೋಧ ಪಕ್ಷಗಳ ಸದಸ್ಯರು ಎರಡೂ ಸದನಗಳಲ್ಲಿ ಸ್ಪೀಕರ್‌, ಸಭಾಪತಿ ಪೀಠಗಳ ಹತ್ತಿರ ಹೋಗಿ ಘೋಷಣಾ ಫಲಕ ಪ್ರದರ್ಶಿಸುವುದಿಲ್ಲ ಮತ್ತು ಸದನಗಳಲ್ಲಿ ಪ್ರತಿಭಟನೆ ನಡೆಸು ವುದಿಲ್ಲವೆಂದು ಖಾತ್ರಿಪಡಿಸಿದರೆ ಮಾತ್ರ ಅಮಾನತು ಶಿಕ್ಷೆ ಹಿಂಪಡೆಯಬಹುದು ಎಂದು ಸರ್ಕಾರ ಪಟ್ಟುಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT