ಗುರುವಾರ , ಮಾರ್ಚ್ 23, 2023
29 °C

ಸ್ವಾತಿ ಮಾಲೀವಾಲ್ ಅವರನ್ನು ಎಳೆದೊಯ್ದಿದ್ದ ಆರೋಪಿ ಎಎಪಿ ಕಾರ್ಯಕರ್ತ: ಬಿಜೆಪಿ ಆರೋಪ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯಲ್ಲಿ ರಾತ್ರಿ ವೇಳೆ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ಇದೆ ಎಂಬುದನ್ನು ಪರೀಕ್ಷಿಸಲು ಮುಂದಾದ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಾಲೀವಾಲ್‌ ಅವರನ್ನು ಕುಡಿದ ಮತ್ತಿನಲ್ಲಿ 15 ಮೀಟರ್‌ನಷ್ಟು ದೂರಕ್ಕೆ ಎಳೆದೊಯ್ದಿದ್ದ ಆರೋಪಿ ಹರೀಶ್‌ ಚಂದ್ರ ಸೂರ್ಯವಂಶಿಯ ಚಿತ್ರವನ್ನು ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ್‌ ಶುಕ್ರವಾರ ಟ್ವೀಟ್‌ ಮಾಡಿದ್ದು, ಈತ ಸಂಗಮ್‌ ವಿಹಾರ್‌ನ ಎಎಪಿಯ ಪ್ರಮುಖ ಕಾರ್ಯಕರ್ತ ಎಂದು ಆರೋಪಿಸಿದ್ದಾರೆ.

ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರೊಂದಿಗೆ ಆರೋಪಿ ಹರೀಶ್‌ ಚಂದ್ರ ಸೂರ್ಯವಂಶಿ ಪ್ರಚಾರದಲ್ಲಿ ತೊಡಗಿರುವುದನ್ನು ಚಿತ್ರದಲ್ಲಿ ಕಾರಣಬಹುದು.

‘ರಾಷ್ಟ್ರ ರಾಜಧಾನಿ ಮಹಿಳೆಯರಿಗೆ ಅಸುರಕ್ಷಿತವೆಂದು ಬಿಂಬಿಸುವ ಮೂಲಕ ದೆಹಲಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೂಷಿಸುವಂತೆ ಮಾಡಲು ಆಮ್ ಆದ್ಮಿ ಪಕ್ಷ ಮಾಡಿರುವ ಪಿತೂರಿಯಂತೆ ಈ ಘಟನೆ ಕಾಣುತ್ತಿದೆ’ ಎಂದು ಸಚ್‌ದೇವ್‌ ಹೇಳಿದ್ದಾರೆ.

ಸ್ವಾತಿ ಮಾಲೀವಾಲ್‌ ಅವರನ್ನು ಎಳೆದೊಯ್ದಿದ್ದ ಘಟನೆ ಕಳೆದ ಗುರುವಾರ ನಡೆದಿತ್ತು. ಈ ಬಗ್ಗೆ ಸ್ವತಃ ಸ್ವಾತಿ ಅವರು ಗುರುವಾರ ಹೇಳಿಕೆ ನೀಡಿ, ‘ದೆಹಲಿಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷರೇ ಸುರಕ್ಷಿತರಲ್ಲ ಎಂದರೆ, ಇತರ ಮಹಿಳೆಯರಿಗೆ ದೆಹಲಿ ಎಷ್ಟು ಅಸುರಕ್ಷಿತ ಎಂಬುದನ್ನು ಯಾರಾದರೂ ಊಹಿಸಬಹುದು’ ಎಂದು ದೂರಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ದೆಹಲಿಯ ಸಂಗಮ್‌ ವಿಹಾರ್‌ನ ನಿವಾಸಿ ಹರೀಶ್‌ ಚಂದ್ರ (47) ಎಂಬಾತನನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

‘ಗಸ್ತಿನಲ್ಲಿದ್ದ ಪೊಲೀಸ್‌ ವಾಹನಕ್ಕೆ ಮಾಲೀವಾಲ್‌ ಅವರು ನಡೆದ ಘಟನೆಯನ್ನು ವಿವರಿಸಿದರು. ಬಳಿಕ ಆ ಕಾರಿನ ಜಾಡು ಹಿಡಿದು, ಆರೋಪಿಯನ್ನು ಬಂಧಿಸಲಾಯಿತು’ ಎಂದು ಡಿಸಿಪಿ (ದಕ್ಷಿಣ) ಚಂದನ್‌ ಚೌದರಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಜನವರಿ 1ರಂದು ಕಾರಿನಡಿಯಲ್ಲಿ ಸಿಲುಕಿದ್ದ ಅಂಜಲಿ ಸಿಂಗ್ ಎಂಬ ಯುವತಿಯನ್ನು ಸುಲ್ತಾನ್‌ಪುರಿಯಿಂದ ಕಂಝಾವಾಲಾವರೆಗೆ ಸುಮಾರು 12 ಕಿ.ಮೀ ಎಳೆದೊಯ್ದು ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಹಿಳಾ ಸುರಕ್ಷತೆಯ ಪರಿಸ್ಥಿತಿಗಳನ್ನು ಸ್ವಾತಿ ಮಾಲೀವಾಲ್‌ ಕೆಲ ದಿನಗಳಿಂದ ಪರೀಶಿಲಿಸುತ್ತಿದ್ದಾರೆ.

ಡಿಸಿಡಬ್ಲ್ಯು ಹೇಳಿಕೆ: ‘ಏಮ್ಸ್‌ ಎದುರಿನ ವರ್ತುಲ ರಸ್ತೆಯ ಬಸ್‌ ನಿಲ್ದಾಣದಲ್ಲಿ ಮಾಲೀವಾಲ್‌ ಅವರು ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾರಿನ ಚಾಲಕ ಅವರನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಕೇಳಿದ್ದನು. ಅದನ್ನು ಮಾಲೀವಾಲ್‌ ನಿರಾಕರಿಸಿದಾಗ, ಕೆಲಕಾಲ ದುರುಗುಟ್ಟಿ ನೋಡಿ ಅಲ್ಲಿಂದ ತೆರಳಿದ್ದ. ಕೆಲವೇ ನಿಮಿಷಗಳಲ್ಲಿ ಅದೇ ಜಾಗಕ್ಕೆ ಮತ್ತೆ ಬಂದ ಆತ, ಕಾರಿನಲ್ಲಿ ಕೂರುವಂತೆ ಪುನಃ ಕೇಳಿದ. ಆಗಲೂ ಮಾಲೀವಾಲ್‌ ನಿರಾಕರಿಸಿದಾಗ, ಆತ ಅಶ್ಲೀಲ ಸನ್ನೆಗಳನ್ನು ತೋರಿ ಅಸಭ್ಯದಿಂದ ವರ್ತಿಸಿದ’ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

‘ಆತನ ವರ್ತನೆಯನ್ನು ಮಾಲೀವಾಲ್‌ ಖಂಡಿಸಿದಾಗ, ಆತ ಮತ್ತೆ ಅಶ್ಲೀಲ ಸನ್ನೆಗಳೊಂದಿಗೆ ಅಸಭ್ಯತೆ ತೋರಿದನು. ಈ ವೇಳೆ ಸ್ವಾತಿ ಅವರು ಚಾಲಕನನ್ನು ಹಿಡಿದಾಗ, ಆತ ಕಾರಿನ ಕಿಟಿಕಿಯ ಗಾಜನ್ನು ಮೇಲಕ್ಕೆತ್ತಿ ಅವರ ಕೈ ಸಿಲುಕುವಂತೆ ಮಾಡಿ, ಕಾರು ಚಲಾಯಿಸಿಕೊಂಡು, ಅವರನ್ನು ಎಳೆದೊಯ್ದನು. ಕೆಲ ಮೀಟರ್‌ಗಳಷ್ಟು ದೂರ ಹೋಗುತ್ತಿದ್ದಂತೆ ಮಾಲೀವಾಲ್‌ ಅವರು ಹೇಗೋ ಅಪಾಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ಪ್ರಕಟಣೆ ತಿಳಿಸಿದೆ.

ಮಹಿಳೆಯೊಬ್ಬರನ್ನು ಹಿಂಸಿಸಿದ್ದ ಆರೋಪಿ

ಆರೋಪಿ ಹರೀಶ್‌ ಚಂದ್ರ ಸೂರ್ಯವಂಶಿಯು ಈ ಹಿಂದೆ ಮಹಿಳೆಯೊಬ್ಬರಿಗೆ ಇದೇ ರೀತಿಯ ಕಿರುಕುಳ ನೀಡಿದ್ದ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.

‘ಜ. 17ರಂದು ಈ ವ್ಯಕ್ತಿ ಲೋಧಿ ರಸ್ತೆಯಲ್ಲಿ ಮಹಿಳೆಯೊಬ್ಬರ ಸುತ್ತ ಕಾರು ಚಲಾಯಿಸುತ್ತಾ, ಕಾರಿನ ಒಳಗೆ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದ. 181 ಸಹಾಯವಾಣಿಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಭಯ ಪಡಬೇಡಿ, ಧ್ವನಿ ಎತ್ತಿ ಎಂದು ಎಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು