ಬುಧವಾರ, ಆಗಸ್ಟ್ 10, 2022
23 °C

'ಸುಲ್ಲಿ ಡೀಲ್ಸ್‌' ಹೆಸರಿನ ಆ್ಯಪ್‌ನಲ್ಲಿ ಭಾರತೀಯ ಮುಸ್ಲಿಂ ಮಹಿಳೆಯರ ಹರಾಜು, ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter

ನವದೆಹಲಿ: ಆನ್‌ಲೈನ್‌ ಮಾರಾಟ ಆ್ಯಪ್‌ ಒಂದರಲ್ಲಿ ಕಳೆದ ಭಾನುವಾರ ಹಲವು ಭಾರತೀಯ ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಇಟ್ಟಿರುವುದು ಬೆಳಕಿಗೆ ಬಂದಿದೆ.

ಪೈಲೆಟ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಹಾನಾ ಖಾನ್‌ ಅವರ ಹೆಸರು ಹರಾಜಿಗಿರುವ ಮಹಿಳೆಯರ ಪೈಕಿ ಸೇರಿರುವುದನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ಆಕೆಯ ಹೆಸರಿರುವ ಟ್ವೀಟ್‌ ಅನ್ನು ಸ್ನೇಹಿತೆಯೊಬ್ಬರು ಗಮನಿಸಿ ಎಚ್ಚರಿಸಿದ್ದಾಗಿ ತಿಳಿಸಿದ್ದಾರೆ.

ಟ್ವೀಟ್‌ ಮೂಲಕ 'ಸುಲ್ಲಿ ಡೀಲ್ಸ್‌' ಎಂಬ ಆ್ಯಪ್‌ ಮತ್ತು ವೆಬ್‌ಸೈಟ್‌ ಒಂದಕ್ಕೆ ಭೇಟಿ ನೀಡಿದಾಗ ಮಹಿಳೆಯರ ಚಿತ್ರಗಳು, ಸಾರ್ವಜನಿಕವಾಗಿ ಲಭ್ಯವಿರುವ ಪ್ರೊಫೈಲ್‌ಗಳು ಕಾಣಸಿಕ್ಕಿವೆ. ಚಿತ್ರದಲ್ಲಿ ಇರುವ ಮಹಿಳೆಯರು ಮಾರಾಟಕ್ಕೆ ಲಭ್ಯವಿರುವುದಾಗಿ ವಿವರಿಸಲಾಗಿದೆ.

ಆರಂಭದಲ್ಲಿ ಅಪರಿಚಿತ ಮಹಿಳೆಯ ಚಿತ್ರವಿದ್ದು, ನಂತರ ಹಾನಾ ಖಾನ್‌ ಅವರ ಸ್ನೇಹಿತೆಯರ ಚಿತ್ರಗಳಿರುವುದನ್ನು ಗಮನಿಸಿದ್ದಾರೆ. ಬಳಿಕ ತಮ್ಮ ಫೋಟೊವನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.

'ಒಟ್ಟು 83 ಹೆಸರುಗಳು ಇದ್ದವು. ಇನ್ನೂ ಹೆಚ್ಚಿರುವ ಸಾಧ್ಯತೆಗಳಿವೆ. ಟ್ವಿಟರ್‌ನಿಂದ ನನ್ನ ಫೋಟೊ ಮತ್ತು ಬಳಕೆದಾದರರ ಹೆಸರನ್ನು ತೆಗೆದುಕೊಂಡು ಪ್ರೊಫೈಲ್‌ ಕ್ರಿಯೇಟ್‌ ಮಾಡಿದ್ದಾರೆ. ಈ ಆ್ಯಪ್‌ ಕಳೆದ 20 ದಿನಗಳಿಂದ ಕ್ರಿಯಾಶೀಲವಾಗಿದೆ. ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದರಿಂದ ತೀವ್ರ ಆಘಾತಗೊಂಡಿದ್ದೇನೆ' ಎಂದು 'ಬಿಬಿಸಿ'ಗೆ ಹಾನಾ ಖಾನ್‌ ತಿಳಿಸಿದ್ದಾರೆ.

ಆ್ಯಪ್‌ನ ಹೆಸರು 'ಸುಲ್ಲಿ' ಎಂದಿದ್ದು, ಮುಸ್ಲಿಂ ಮಹಿಳೆಯರನ್ನು ಟ್ರೋಲ್‌ ಮಾಡಲು ಬಳಸುವ ಪದ ಇದಾಗಿದೆ ಎನ್ನಲಾಗಿದೆ. ಈ ಆ್ಯಪ್‌ನ ಉದ್ದೇಶ ಮಹಿಳೆಯರನ್ನು ಮಾರಾಟ ಮಾಡುವುದಲ್ಲ. ಬದಲಾಗಿ ಮುಸ್ಲಿಂ ಮಹಿಳೆಯರನ್ನು ಅವಮಾನಿಸಲು 'ಸುಲ್ಲಿ ಡೀಲ್ಸ್‌' ಎಂಬ ಆ್ಯಪ್‌ ಮತ್ತು ವೆಬ್‌ಸೈಟ್‌ ತೆರೆದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಗಿಟ್‌ಹಬ್‌ ಎಂಬ ವೆಬ್‌ಪ್ಲಾಟ್‌ಫಾರ್ಮ್‌ನಲ್ಲಿ 'ಸುಲ್ಲಿ ಆ್ಯಪ್‌' ಲಭ್ಯವಿತ್ತು. ಹಲವು ದೂರುಗಳು ವ್ಯಕ್ತವಾದಂತೆ, ಎಲ್ಲ ಪ್ರೊಫೈಲ್‌ಗಳನ್ನು ಅಮಾನತಗೊಳಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಗಿಟ್‌ಹಬ್‌ ತಿಳಿಸಿದೆ.

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಈ ಕುರಿತು ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು