ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಕಾಶ್ಮೀರಕ್ಕೆ ಆತಂಕ: ಭದ್ರತಾ ತಜ್ಞರು

Last Updated 17 ಆಗಸ್ಟ್ 2021, 9:56 IST
ಅಕ್ಷರ ಗಾತ್ರ

ಶ್ರೀನಗರ: ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಧೈರ್ಯ ತುಂಬಲಿದೆ. ಉಗ್ರ ಚಟುವಟಿಕೆಗಳ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ಭದ್ರತಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿರುವುದು ಕಾಶ್ಮೀರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಪಾಕಿಸ್ತಾನ ಸೇನೆ ಮತ್ತು ಅದರ ಗೂಢಚಾರ ಸಂಸ್ಥೆ ಐಎಸ್‌ಐಗೆ ನೆರವಾಗಲಿದೆ. ಅಂತರರಾಷ್ಟ್ರೀಯ ಸಮುದಾಯದ ಕಣ್ಣುತಪ್ಪಿಸುವ ಸಲುವಾಗಿ ಪಾಕಿಸ್ತಾನವು ಭಯೋತ್ಪಾದನೆ ತರಬೇತಿಯನ್ನು ಪಾಕ್ ಆಕ್ರಮಿತ ಕಾಶ್ಮೀರದಿಂದ ಆಫ್ಗಾನಿಸ್ತಾನಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಓದಿ:

‘ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳಿಗೆ ಅಫ್ಗಾನಿಸ್ತಾನವು ಸುರಕ್ಷಿತ ಸ್ವರ್ಗವಾಗಿ ಪರಿಣಮಿಸಲಿದೆ. ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲು ಜಮ್ಮು–ಕಾಶ್ಮೀರಕ್ಕೆ ಉಗ್ರರನ್ನು ಕಳುಹಿಸಿಕೊಡುವಂತೆಯೂ ತಾಲಿಬಾನ್‌ಗೆ ಐಎಸ್‌ಐ ಮನವಿ ಮಾಡಬಹುದು’ ಎಂದು ಜಮ್ಮು–ಕಾಶ್ಮೀರ ಪೊಲೀಸ್ ಮುಖ್ಯಸ್ಥ ಶೇಷ್ ಪಾಲ್ ವೈದ್ ಹೇಳಿದ್ದಾರೆ.

ಭಾರತವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದಿರುವ ಅವರು, ನಾವು ಚೀನಾ, ಪಾಕಿಸ್ತಾನ, ತಾಲಿಬಾನ್ ಮೈತ್ರಿಯೊಂದಿಗೆ ವ್ಯವಹರಿಸಬೇಕಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

‘ಅಫ್ಗಾನಿಸ್ತಾನದಿಂದ ಯುರೋಪ್ ಗಡಿಯವರೆಗೆ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಚಿಂತನೆಯನ್ನು ಇನ್ನೂ ತಾಲಿಬಾನ್ ಕೈಬಿಟ್ಟಿಲ್ಲ. ಇತ್ತೀಚಿನ ವರ್ಷಗಳಲ್ಲಿ ಜಮ್ಮು–ಕಾಶ್ಮೀರದಲ್ಲಿನ ಉಗ್ರ ಚಟುವಟಿಕೆಯಲ್ಲಿ ಇದರ ಪ್ರಭಾವವನ್ನು ಗಮನಿಸಬಹುದಾಗಿದೆ. ಜೈಷ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಗುಂಪುಗಳು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಯತ್ನಿಸಬಹುದು’ ಎಂದು ಒಳನುಸುಳುವಿಕೆ ತಡೆ ಕಾರ್ಯಾಚರಣೆಯಲ್ಲಿ ತೊಡಗಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

1996ರಿಂದ 2001ರ ವರೆಗೆ ತಾಲಿಬಾನ್ ಆಡಳಿತದಲ್ಲಿದ್ದಾಗ ಅನೇಕ ವಿದೇಶಿ ಭಯೋತ್ಪಾದಕರು ಕಾಶ್ಮೀರಕ್ಕೆ ನುಸುಳಿದ್ದಾರೆ. 1999ರ ಕಾರ್ಗಿಲ್‌ ಯುದ್ಧದಿಂದ 2001ರ ಸಂಸತ್ ಭವನದ ಮೇಲಿನ ದಾಳಿಯ ನಡುವಣ ಅವಧಿಯ ದುಷ್ಕೃತ್ಯಗಳಲ್ಲಿ ವಿದೇಶಿ ಭಯೋತ್ಪಾದಕರ ಪಾತ್ರ ಹೆಚ್ಚಿದೆ.

‘1980ರ ಅಂತ್ಯದಲ್ಲಿ ಸೋವಿಯತ್ ಪಡೆಗಳು ಅಫ್ಗಾನಿಸ್ತಾನದಿಂದ ನಿರ್ಗಮಿಸಿದ ಬಳಿಕ ಭಾರತ ವಿರೋಧಿ ಸಶಸ್ತ್ರ ಒಳನುಸುಳುವಿಕೆ ಕಾಶ್ಮಿರ ಕಣಿವೆಯಲ್ಲಿ ಹೆಚ್ಚಾಗಿತ್ತು. ಸೋವಿಯತ್ ಪಡೆಗಳ ಹಿಂಪಡೆಯುವಿಕೆಯು ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಹೆಚ್ಚಳಕ್ಕೆ ಕಾರಣವಾಗಿತ್ತು. ಇದೀಗ ಅಮೆರಿಕ ಪಡೆಗಳ ಹಿಂಪಡೆಯುವಿಕೆಯೂ ಅಂತಹದ್ದೇ ಪರಿಸ್ಥಿತಿಗೆ ಕಾರಣವಾಗುವ ಸಾಧ್ಯತೆ ಇದೆ’ ಎಂದು ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರದಲ್ಲಿರುವ ಅನೇಕರು ತಾಲಿಬಾನ್ ಉಗ್ರರು ಇಲ್ಲಿಗೆ ಬಂದು ಹೋರಾಡಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನ ಮತ್ತಷ್ಟು ಪ್ರಚೋದನೆ ನೀಡಿದರೆ ಉಗ್ರರು ಕಾಶ್ಮೀರವನ್ನು ಇನ್ನಷ್ಟು ಗುರಿಯಾಗಿಸುವ ಸಾಧ್ಯತೆ ಇದೆ ಎಂದು ಕಾಶ್ಮೀರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ನೂರ್ ಅಹ್ಮದ್ ಬಾಬಾ ಹೇಳಿದ್ದಾರೆ.

ಆದರೆ, ಭಾರತವು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಡಿಜಿ ಎಸ್.ಎಸ್.ದೇಸ್ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT