ಶುಕ್ರವಾರ, ನವೆಂಬರ್ 27, 2020
18 °C
ತಮಿಳುನಾಡು ಸರ್ಕಾರದ ಮಸೂದೆಗೆ ರಾಜ್ಯಪಾಲರ ಅಂಕಿತ

ವೈದ್ಯಕೀಯ ಕೋರ್ಸ್‌: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಮೀಸಲಾತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ನೀಟ್‌ ತೇರ್ಗಡೆಯಾಗಿರುವ, ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ತಮಿಳುನಾಡಿನ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಶುಕ್ರವಾರ ಅನುಮೋದನೆ ನೀಡಿದ್ದಾರೆ.

‘ರಾಜ್ಯಪಾಲರು ಈ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಜನರಿಗೆ ತಿಳಿಸಲು ಬಯಸುತ್ತೇವೆ’ ಎಂದು ರಾಜಭವನವು ಶುಕ್ರವಾರ ತಿಳಿಸಿದೆ. ಮಸೂದೆ ಕುರಿತಂತೆ ಸಾಲಿಸಿಟರ್‌ ಜನರಲ್‌ ಆಫ್‌ ಇಂಡಿಯಾ(ಎಸ್‌ಜಿಐ) ಅವರಿಂದ ರಾಜ್ಯಪಾಲರು ಸೆ.26ರಂದು ಕಾನೂನು ಸಲಹೆ ಕೇಳಿದ್ದರು. ಅ.29ರಂದು ಎಸ್‌ಜಿಐ ತಮ್ಮ ಸಲಹೆಯನ್ನು ರಾಜ್ಯಪಾಲರಿಗೆ ನೀಡಿದ್ದಾರೆ. ಇದಾದ ಕೂಡಲೇ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡಿದ್ದಾರೆ ಎಂದು ರಾಜಭವನವು ಉಲ್ಲೇಖಿಸಿದೆ.

2020–21 ಶೈಕ್ಷಣಿಕ ವರ್ಷದಿಂದಲೇ ಈ ಮೀಸಲಾತಿ ಜಾರಿಗೆ ತರಲು ನಿರ್ಧರಿಸಿದ್ದ ರಾಜ್ಯ ಸರ್ಕಾರವು ಈ ಕುರಿತ ಆದೇಶವನ್ನೂ ಹೊರಡಿಸಿದೆ.

ಮಸೂದೆಗೆ ಸೆ.15ರಂದು ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿತ್ತು. ಇದಾದ ನಂತರದಲ್ಲಿ ರಾಜ್ಯಪಾಲರು ಒಪ್ಪಿಗೆಗಾಗಿ ಕಳುಹಿಸಿಕೊಡಲಾಗಿತ್ತು. ರಾಜ್ಯಪಾಲರು ಈ ಮಸೂದೆಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಇತ್ತೀಚೆಗೆ ಕೇಳಿಬಂದಿತ್ತು. ಇದರ ನಡುವೆಯೇ ‘ಮಸೂದೆ ಸಂವಿಧಾನಬದ್ಧವಾಗಿದೆ’ ಎನ್ನುವ ಎಸ್‌ಜಿಐ ಸಲಹೆ ದೊರಕಿದ ಬೆನ್ನಲ್ಲೇ ರಾಜ್ಯಪಾಲರ ಹಸಿರು ನಿಶಾನೆ ದೊರೆತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಗಳು ಆರಂಭವಾಗಿವೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದರು. 

ಡಿಎಂಕೆ ಪ್ರತಿಭಟನೆ: ರಾಜ್ಯಪಾಲರು ವಿಳಂಬನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಂಕೆ ಪಕ್ಷವು ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಮಸೂದೆಗೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರದ ಎಐಎಡಿಎಂಕೆ ನಾಯಕರ ವಿರುದ್ಧವೂ ಡಿಎಂಕೆ ಆಕ್ರೋಶ ವ್ಯಕ್ತಪಡಿಸಿತ್ತು. ‘ಮಸೂದೆಗೆ ಒಪ್ಪಿಗೆ ನೀಡದ ಹೊರತು ರಾಜ್ಯಪಾಲರ ಬಳಿ ಬೇರೆ ಯಾವ ಮಾರ್ಗವೂ ಇರಲಿಲ್ಲ. ಪಕ್ಷದ ಪ್ರತಿಭಟನೆ ಹಾಗೂ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ನಿರ್ದೇಶನದಿಂದ ತಕ್ಷಣದಲ್ಲೇ ಈ ಮಸೂದೆಗೆ ಒಪ್ಪಿಗೆ ದೊರಕಿದೆ’ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟ್ಯಾಲಿನ್‌ ಟ್ವೀಟ್ ಮೂಲಕ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು