ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಪಾವತಿ ವಿಚಾರದಲ್ಲೂ ರಾಜಕೀಯ: ತೇಜಸ್ವಿ ಸೂರ್ಯಗೆ ತಿವಿದ ತಮಿಳುನಾಡಿನ ಹೋಟೆಲ್

Last Updated 3 ಏಪ್ರಿಲ್ 2021, 15:39 IST
ಅಕ್ಷರ ಗಾತ್ರ

ಕೊಯಮತ್ತೂರು: ಉಪಾಹಾರದ ಬಿಲ್‌ ಪಾವತಿ ವಿಚಾರದಲ್ಲಿ ರಾಜಕೀಯ ಮಾಡಲು ಹೋದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೊಯಮತ್ತೂರಿನ ಹೋಟೆಲ್‌ವೊಂದು ಪರೋಕ್ಷವಾಗಿ ಟಾಂಗ್‌ ನೀಡಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಶುಕ್ರವಾರ) ಕೊಯಮತ್ತೂರಿನಲ್ಲಿ ಬಿಜೆಪಿ ಪರ ಪ್ರಚಾರವನ್ನು ಸಂಸದ ತೇಜಸ್ವಿ ಸೂರ್ಯ ಕೈಗೊಂಡಿದ್ದರು. ಆ ವೇಳೆ 'ಶ್ರೀ ಅನ್ನಪೂರ್ಣ' ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸಿದ್ದರು. ತೇಜಸ್ವಿ ಸೂರ್ಯ ಅವರ ಉಪಾಹಾರದ ಬಿಲ್‌ ಅನ್ನು ಪಾವತಿಸಿಕೊಳ್ಳಲು ಹೋಟೆಲ್‌ ಕ್ಯಾಷಿಯರ್‌ ಸಮ್ಮತಿಸಿರಲಿಲ್ಲ. ಒತ್ತಾಯದ ಬಳಿಕವಷ್ಟೇ ಬಿಲ್‌ ಪಾವತಿಸಿಕೊಳ್ಳಲು ಕ್ಯಾಷಿಯರ್‌ ಮುಂದೆ ಬಂದರು' ಎಂದು ಬಿಜೆಪಿ ಸಂಸದ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಘಟನೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಡಿಎಂಕೆಯನ್ನು ಟೀಕಿಸುವ ಪ್ರಯತ್ನವನ್ನು ತೇಜಸ್ವಿ ಸೂರ್ಯ ಮಾಡಿದ್ದಾರೆ. ಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಈ ಘಟನೆ ಬಗ್ಗೆ ಟ್ವೀಟ್‌ ಮಾಡಿರುವ ತೇಜಸ್ವಿ ಸೂರ್ಯ, 'ಇಂದು ಕೊಯಮತ್ತೂರಿನ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಮುಗಿಸಿದೆ. ಆ ನಂತರ ನಾನು ಸಹಜವಾಗಿಯೇ ಬಿಲ್‌ ಅನ್ನು ಪಾವತಿಸಲು ಹೋದೆ. ನಾನು ನೀಡಲು ಹೋದ ಹಣವನ್ನು ಸ್ವೀಕರಿಸಲು ಅಲ್ಲಿದ್ದ ಕ್ಯಾಷಿಯರ್ ಹಿಂಜರಿದರು. ನನ್ನ ಒತ್ತಾಯದ ನಂತರ ಹಣವನ್ನು ಸ್ವೀಕರಿಸಲು ಒಪ್ಪಿಕೊಂಡರು. ನಾವು ಬಿಜೆಪಿಯವರು ಎಂದು ಕ್ಯಾಷಿಯರ್‌ಗೆ ಹೇಳಿದೆ' ಎಂದು ಟ್ವೀಟಿಸಿದ್ದಾರೆ.

'ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ ಬಿಜೆಪಿ. ಸಣ್ಣ ವ್ಯಾಪಾರಿಗಳಿಂದಲೂ ರೋಲ್-ಕಾಲ್ ಮಾಡಲು ನಾವು ಡಿಎಂಕೆ ಅಲ್ಲ' ಎಂದು ಇದೇ ಟ್ವೀಟ್‌ನ ಕೊನೆಯಲ್ಲಿ ತೇಜಸ್ವಿ ಸೂರ್ಯ ಬರೆದುಕೊಂಡಿದ್ದಾರೆ.

ಈ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿರುವ 'ಶ್ರೀ ಅನ್ನಪೂರ್ಣ' ಹೋಟೆಲ್‌ ತೇಜಸ್ವಿ ಸೂರ್ಯ ಅವರಿಗೆ ಪರೋಕ್ಷವಾಗಿ ತಿವಿದಿದೆ.

'ಆತ್ಮೀಯ ತೇಜಸ್ವಿ ಸೂರ್ಯ ಅವರೆ, ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ನೀಡಿದ್ದಕ್ಕೆ ಸಂತೋಷವಾಗಿದೆ. ಅನ್ನಪೂರ್ಣ ಹೋಟೆಲ್‌ನಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ವಾಸ್ತವವಾಗಿ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಉಚಿತವಾಗಿ ನೀಡುವಂತೆ ಯಾರೂ ನಮ್ಮನ್ನು, ಯಾವುದಕ್ಕೂ ಒತ್ತಾಯಿಸುವುದಿಲ್ಲ. ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ತೆಗೆದುಕೊಳ್ಳದಿರಲು ಕೆಲವೊಮ್ಮೆ ನಾವು ತೀರ್ಮಾನಿಸುತ್ತೇವೆ. ಇದು ಕೇವಲ ಪ್ರೀತಿ ಮತ್ತು ಗೌರವಕ್ಕಾಗಿ' ಎಂದು ಶ್ರೀ ಅನ್ನಪೂರ್ಣ ಹೋಟೆಲ್‌ ಪೋಸ್ಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT