ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರರ್ ಆಫ್ ಅನ್ಬು ಜ್ಯೋತಿ ಆಶ್ರಮ: ಮುಖವಾಡ ಕಳಚಿ ಬಿದ್ದ ರೋಚಕ ಕಥೆ ಇಲ್ಲಿದೆ..

Last Updated 19 ಫೆಬ್ರುವರಿ 2023, 11:51 IST
ಅಕ್ಷರ ಗಾತ್ರ

ಬೆಂಗಳೂರು: ಆಶ್ರಮದ ಹೆಸರಿನಲ್ಲಿ ಸಮಾಜ ಸೇವೆ ಎಂದು ಕೆಲವರು ಅವುಗಳನ್ನು ದುರುಪಯೋಗ ಪಡಿಸಿಕೊಂಡು ಕಡೆಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇದೀಗ ಇಂತಹದೇ ಒಂದು ಹೈಪ್ರೊಫೈಲ್ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದ್ದು ಅಲ್ಲಿ ನಡೆಯುತ್ತಿದ್ದ ಸಂಗತಿಗಳು ಹೊರಜಗತ್ತನ್ನು ಬೆಚ್ಚಿಬೀಳಿಸಿವೆ.

ಹೌದು, ಪಾಂಡಿಚೇರಿ ಸನಿಹದಲ್ಲಿರುವ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ‘ಅನ್ಬು ಜ್ಯೋತಿ ಆಶ್ರಮ’ ಎಂಬ ಎನ್‌ಜಿಒ ವಿರುದ್ಧ ನಿರ್ಗತಿಕರ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿರುವ ಆರೋಪ ಕೇಳಿಬಂದಿದೆ.

ಏನಿದು ಪ್ರಕರಣ?

2005ರಲ್ಲಿ ವಿಲ್ಲುಪುರಂನ ಕುಂಡಲಪುಲಿಯೂರ್‌ ಎಂಬಲ್ಲಿನ ಒಂದು ಬೀದಿಯ ಸಣ್ಣ ಮನೆಯಲ್ಲಿ ‘ಅನ್ಬು ಜ್ಯೋತಿ ಆಶ್ರಮ’ ಸ್ಥಾಪನೆಯಾಗಿತ್ತು.

ಈ ಆಶ್ರಮದ ಮೂಲಕ ನಿರ್ಗತಿಕರಿಗೆ, ಮಾನಸಿಕರ ರೋಗಿಗಳಿಗೆ, ಮನೆ ಬಿಟ್ಟು ಬಂದ ಅಬಲೆಯರಿಗೆ ಆಶ್ರಯ ನೀಡಲಾಗುತ್ತಿತ್ತು. ಈ ಆಶ್ರಮವನ್ನು ಕೇರಳದ ಎರ್ನಾಕುಲಂ ಮೂಲದ ಅನ್ಬು ಜುಬಿನ್ ಅಲಿಯಾಸ್ ಬೇಬಿ ಜುಬಿನ್ ಹಾಗೂ ಆತನ ಪತ್ನಿ ಮರಿಯಾ ಬೇಬಿ ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದರು.

ಈ ಆಶ್ರಮದಲ್ಲಿ ಆರಂಭದಲ್ಲಿ 12ಜನ ಇದ್ದರು. ನಂತರ 200ಕ್ಕೂ ಹೆಚ್ಚು ಜನ ಇದ್ದರು. ಬಳಿಕ ಬೆಂಗಳೂರು, ರಾಜಸ್ಥಾನದಲ್ಲಿ ‘ಅನ್ಬು ಜ್ಯೋತಿ ಆಶ್ರಮ’ದ ಉಪ ಆಶ್ರಮಗಳನ್ನು ಮಾಡಲಾಗಿತ್ತು. ಈ ಆಶ್ರಮದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರ ಜಂಟಿ ಕಾರ್ಯಾಚರಣೆಯೊಂದಿಗೆ ವಿಲ್ಲುಪುರಂ ಪೊಲೀಸರು ಬೇಬಿ ಜುಬಿನ್, ಮರಿಯಾ ಬೇಬಿ ಹಾಗೂ ಇತರ ಆರು ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 130 ಕ್ಕೂ ಹೆಚ್ಚು ಸಂತ್ರಸ್ತರನ್ನು ವಿಲ್ಲುಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇಳಿ ಬಂದಿರುವ ಆರೋಪಗಳೇನು?

ಆಶ್ರಮಕ್ಕೆ ಸೇರುತ್ತಿದ್ದ ಅನಾಥ ಹೆಣ್ಣು ಮಕ್ಕಳಿಗೆ ಮತ್ತು ಅಬಲೆಯರಿಗೆ ಡ್ಸಗ್ಸ್ ನೀಡಿ ಅತ್ಯಾಚಾರ ಎಸಗಲಾಗುತ್ತಿತ್ತು ಎನ್ನಲಾಗಿದೆ.

ಆಶ್ರಮಕ್ಕೆ ಬಂದು ಸೇರುತ್ತಿದ್ದ ನಿರ್ಗತಿಕರಿಗೆ ಮಾನಸಿಕ ಅಸ್ವಸ್ಥತೆ ಬರುವ ಔಷಧಿ ನೀಡಿ ಅವರನ್ನು ಹುಚ್ಚರಂತೆ ಬಿಂಬಿಸಿ ಅನುಕಂಪದ ಆಧಾರದ ಮೇಲೆ ಚಿಕಿತ್ಸೆ ನೆಪದಲ್ಲಿ ಶ್ರೀಮಂತರಿಂದ ಹಣ ಕೀಳಲಾಗುತ್ತಿತ್ತು ಎನ್ನಲಾಗಿದೆ.

ಮಹಿಳೆಯರನ್ನು ಮತ್ತು ನಿರ್ಗತಿಕರನ್ನು ಮಾನವ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

‘ಅನ್ಬು ಜ್ಯೋತಿ ಆಶ್ರಮ’ ಯಾವುದೇ ಪರವಾನಗಿ ಇಲ್ಲದೇ ಮತ್ತು ಕಾನೂನು ಪ್ರಕಾರ ನೋಂದಣಿಯಾಗದೇ ಕಾರ್ಯನಿರ್ವಹಿಸುತ್ತಿತ್ತು ಎಂದು ದೂರಲಾಗಿದೆ.

ಬೇಬಿ ದಂಪತಿ, ಆಶ್ರಮದಲ್ಲಿ ಎರಡು ಕಾಡು ಮಂಗಗಳನ್ನು ಸಾಕಿದ್ದರು. ಅತ್ಯಾಚಾರ ವಿರೋಧಿಸುತ್ತಿದ್ದವರ ಮೇಲೆ ಈ ಮಂಗಗಳಿಂದ ಮಾರಕವಾಗಿ ದಾಳಿ ಮಾಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಆಶ್ರಮದಲ್ಲಿ ಮಾನಸಿಕ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಬಿಂಬಿಸಲಾಗುತ್ತಿತ್ತು. ಇದಕ್ಕಾಗಿ ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಆಶ್ರಮಕ್ಕೆ ಸೆಳೆದು ಅವರ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.

ಆಶ್ರಮ ತೊರೆದು ಹೋಗಲು ಯತ್ನಿಸುತ್ತಿದ್ದವರಿಗೆ ಸರಪಳಿಯಿಂದ ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತಿತ್ತು ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?‌

ಈ ಪ್ರಕರಣ ಬೆಳಕಿಗೆ ಬಂದಿದ್ದು ಸ್ವಾರಸ್ಯಕರವಾಗಿದೆ. ಅಮೆರಿಕದಲ್ಲಿ ವಾಸವಾಗಿರುವ ವಿಲ್ಲುಪುರಂನ ಸಲೀಂ ಖಾನ್ ಅವರು ತಮ್ಮ ಮಾವ ಜವಾಹಿರುಲ್ಲಾ ಕಾಣೆಯಾಗಿದ್ದಾರೆ ಎಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಕೇದಾರ್ ಪೊಲೀಸ್ ಠಾಣೆಯಲ್ಲಿ 2022ರ ಡಿಸೆಂಬರ್‌ 17 ರಂದು ನಾಪತ್ತೆ ದೂರು ದಾಖಲಿಸಿರುತ್ತಾರೆ.

ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಜವಾಹಿರುಲ್ಲಾ ಅವರನ್ನು ವಿಲ್ಲುಪುರಂನ ‘ಅನ್ಬು ಜ್ಯೋತಿ ಆಶ್ರಮ’ಕ್ಕೆ ಡಿಸೆಂಬರ್ 4, 2022 ರಂದು ದಾಖಲಿಸಲಾಗಿತ್ತು ಎಂಬುದನ್ನು ಕಂಡುಕೊಳ್ಳುತ್ತಾರೆ. ಅಲ್ಲಿಗೆ ಹೋಗಿದ್ದ ಪೊಲೀಸರು ಜವಾಹಿರುಲ್ಲಾ ಅವರ ಬಗ್ಗೆ ಕೇಳಿದ್ದರು. ‘ಅವರನ್ನು ಬೆಂಗಳೂರಿನ ಆಶ್ರಮವೊಂದರಲ್ಲಿ ಇಡಲಾಗಿದೆ’ ಎಂದು ಅಲ್ಲಿನ ಸಿಬ್ಬಂದಿ ಹೇಳಿ ಕಳುಹಿಸಿದ್ದರು.

ತಮಿಳುನಾಡು ಪೊಲೀಸರು ಬೆಂಗಳೂರಿನ ಆಶ್ರಮಕ್ಕೆ ಭೇಟಿ ಕೊಟ್ಟಾಗ ಆ ಆಶ್ರಮವನ್ನು ನೋಡಿಕೊಳ್ಳುತ್ತಿದ್ದ ರಾಜಾ ಎನ್ನುವ ವ್ಯಕ್ತಿ, ‘ಜವಾಹಿರುಲ್ಲಾ ಹಾಗೂ ಕೆಲವರು ಬಾತ್‌ರೂಂ ಕಿಟಕಿ ಒಡೆದು ಪರಾರಿಯಾಗಿದ್ದಾರೆ’ ಎಂದು ಪೊಲೀಸರಿಗೆ ತಿಳಿಸಿದ್ದ. ಆದರೆ, ಸ್ಥಳೀಯ ಪೊಲೀಸರಿಗೆ ರಾಜಾ ಅವರು ದೂರು ನೀಡಿರಲಿಲ್ಲ.

ಜವಾಹಿರುಲ್ಲಾ ಪತ್ತೆಯಾಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಸಲೀಂ ಖಾನ್ ಅವರು ಮದ್ರಾಸ್ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಜವಾಹಿರುಲ್ಲಾ ಅವರನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ಹೈಕೋರ್ಟ್ ತಾಕೀತು ಮಾಡಿತ್ತು.

ಆ ನಂತರ ‘ಅನ್ಬು ಜ್ಯೋತಿ ಆಶ್ರಮ’ದ ಮೇಲೆ ದಾಳಿ ಮಾಡಿದ ಪೊಲೀಸರು ಅಲ್ಲಿನ ಪರಿಸ್ಥಿತಿ ಕಂಡು ಬೆಚ್ಚಿ ಬಿದ್ದಿದ್ದರು. ಈ ವೇಳೆ ಪೊಲೀಸರನ್ನು ಹೆದರಿಸಲು ಪ್ರಯತ್ನಿಸಿದ್ದ ಬೇಬಿ ದಂಪತಿ ಪೊಲೀಸರ ಮೇಲೆ ಪಂಜರದಲ್ಲಿದ್ದ ಎರಡು ಕಾಡು ಮಂಗಗಳನ್ನು ಬಿಟ್ಟು ದಾಳಿ ಮಾಡಿಸಿದ್ದರು. ಆದರೂ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಅಲ್ಲಿದ್ದ ಬಾಲಕ ಸೇರಿದಂತೆ 109 ಪುರುಷರು, 33 ಮಹಿಳೆಯರು ಒಳಗೊಂಡಂತೆ 142 ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜವಾಹಿರುಲ್ಲಾ ಸೇರಿದಂತೆ 12 ಜನರನ್ನು ಅವರ ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಸದ್ಯ ಬೇಬಿ ಜುಬಿನ್ ಅವನ ಪತ್ನಿ ಮರಿಯಾ, ವಾರ್ಡನ್, ಅಡುಗೆಯವರು ಸೇರಿದಂತೆ 8 ಜನರನ್ನು ಬಂಧಿಸಿರುವ ಪೊಲೀಸರು 13 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಲ್ಲುಪುರಂ ಜಿಲ್ಲಾಧಿಕಾರಿ ಸಿ. ಪಳನಿ ಅವರು ಅನ್ಬು ಜ್ಯೋತಿ ಆಶ್ರಮವನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ಸಿ ಪಳನಿ ಅವರೊಂದಿಗೆ ಕಳೆದ ಫೆ. 18ರಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯ ಸಂಯೋಜಕ ಕಾಂಚನ್ ಕಟ್ಟರ್ ಅವರು ಸಂತ್ರಸ್ತರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ.

ಆಶ್ರಮದ ದಾಖಲಾತಿ ಪ್ರಕಾರ ಇನ್ನೂ 11 ಜನ ಪತ್ತೆಯಾಗಿಲ್ಲ. ಅವರನ್ನು ಮಾನವ ಕಳ್ಳಸಾಗಣೆ ಮಾಡಲಾಯಿತೇ? ಅಥವಾ ಅವರನ್ನು ಕೊಂದು ಅಂಗಾಂಗಗಳನ್ನು ಮಾರಾಟ ಮಾಡಲಾಯಿತೇ? ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ.

ಆಧಾರ; ದಿ ಹಿಂದೂ ತಮಿಳ್ ಹಾಗೂ ದಿ ನ್ಯೂಸ್ ಮಿನಿಟ್

–––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT