ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಪಿ ಅಧಿಕಾರಕ್ಕೆ ಬಂದ ನಂತರವೇ ಸದನಕ್ಕೆ ಪ್ರವೇಶ: ನಾಯ್ಡು ಪ್ರತಿಜ್ಞೆ

Last Updated 19 ನವೆಂಬರ್ 2021, 19:05 IST
ಅಕ್ಷರ ಗಾತ್ರ

ಅಮರಾವತಿ: ‘ತೆಲುಗು ದೇಶಂ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ ನಂತರವೇ ನಾನು ವಿಧಾನಸಭೆಗೆ ಪ್ರವೇಶ ಮಾಡುತ್ತೇನೆ’ ಎಂದು ಆ ಪಕ್ಷದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಶಪಥ ಮಾಡಿದರು.

ವಿಧಾನಸಭೆ ವಿರೋಧಪಕ್ಷದ ನಾಯಕರೂ ಆದ ನಾಯ್ಡು ಗುರುವಾರ ಭಾವುಕರಾಗಿದ್ದು, ತಮ್ಮ ನಿಲುವನ್ನು ಪ್ರಕಟಿಸಿದರು. ‘ತಮ್ಮ ವಿರುದ್ಧ ಆಡಳಿತ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರ ನಿರಂತರ ನಿಂದನೆಯಿಂದ ನಾನು ನೊಂದಿದ್ದೇನೆ’ ಎಂದು ಕಾರಣವನ್ನು ತಿಳಿಸಿದರು.

‘ಎರಡೂವರೆ ವರ್ಷದಿಂದ ಇಂತಹ ಅಪಮಾನವನ್ನು ಸಹಿಸಿಕೊಂಡು, ತಾಳ್ಮೆಯಿಂದ ಇದ್ದೇನೆ. ಇಂದು, ನನ್ನ ಪತ್ನಿಯನ್ನೂ ಗುರಿಯಾಗಿಸಿ ಕೊಂಡು ನಿಂದಿಸಲಾಗಿದೆ. ನಾನು ಗೌರವದಿಂದ ಗೌರವಕ್ಕಾಗಿ ಬದುಕಿದ್ದೇನೆ. ಇನ್ನು ಇಂತಹ ನಿಂದನೆ ಸಹಿಸಿಕೊಳ್ಳಲು ಆಗದು’ ಎಂದರು.

ಅವರು ಮಾತು ಮುಂದುವರಿಸುತ್ತಿರುವಂತೆಯೇ ಸ್ಪೀಕರ್‌ ತಮ್ಮಿನೇನಿ ಸೀತಾರಾಂ ಅವರು ಮೈಕ್‌ನ ಸಂಪರ್ಕವನ್ನು ಕಡಿತಗೊಳಿಸಲು ಸೂಚಿಸಿದರೆ, ಆಡಳಿತ ಪಕ್ಷದ ಸದಸ್ಯರು ನಾಯ್ಡು ಅವರ ಈ ನಿರ್ಧಾರವನ್ನು ‘ಡ್ರಾಮಾ’ ಎಂದು ನಿಂದಿಸಿದರು.

ಇದಕ್ಕೂ ಮುನ್ನ ಸದನದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಉಭಯ ಪಕ್ಷಗಳ ಶಾಸಕರ ನಡುವೆ ವಾಗ್ವಾದ ನಡೆದಿತ್ತು. ನಾಯ್ಡು ಅವರು ಇದರಿಂದ ವಿಚಲಿತರಾಗಿದ್ದರು. ಬಳಿಕ ತಮ್ಮ ಕಚೇರಿಯಲ್ಲಿ ಶಾಸಕರ ತುರ್ತು ಸಭೆ ಕರೆದರು. ಅಲ್ಲಿಯೂ ಒಂದೆರಡು ಬಾರಿ ಗದ್ಗದಿತರಾದರು ಎಂದು ಹೇಳಲಾಗಿದೆ. ಅವರನ್ನು ಸಮಾಧಾನಪಡಿಸಲು ವಿಫಲರಾದ ಶಾಸಕರು ಮರಳಿ ಕಲಾಪಕ್ಕೆ ಬಂದರು.

ನಂತರ ನಾಯ್ಡು ತಮ್ಮ ನಿರ್ಧಾರ ಪ್ರಕಟಿಸಿದ್ದು, ‘ಟಿಡಿಪಿ ಅಧಿಕಾರಕ್ಕೆ ಬರುವವರೆಗೂ ಸದನದಿಂದ ದೂರ ಉಳಿಯುತ್ತೇನೆ‘ ಎಂದು ಹೇಳಿದರು.

‘ವಿರೋಧಪಕ್ಷದ ನಾಯಕರು ಆದ ಅವರು ಬರುತ್ತಾರೆ ಎಂದು ಕಲಾಪದ ಆರಂಭವನ್ನು ಕೆಲಹೊತ್ತು ವಿಳಂಬ ಮಾಡಲಾಯಿತು. ಆದರೆ, ಅವರು ಬರಲಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು. ನಾಯ್ಡು ನಂತರವೂ ಕೆಲಹೊತ್ತು ವಿಧಾನಸಭೆಯಲ್ಲಿ ಇದ್ದರಾದರೂ ಸದನಕ್ಕೆ ಹಾಜರಾಗಲಿಲ್ಲ.

ಏಕೆ ನುಣುಚಿಕೊಳ್ಳುತ್ತಿದ್ದಾರೆ: ಮುಖ್ಯಮಂತ್ರಿ ಪ್ರಶ್ನೆ

ಟಿಡಿಪಿ ಅಧ್ಯಕ್ಷ ಚಂದ್ರಬಾಬುನಾಯ್ಡು ಅವರ ತೀರ್ಮಾನ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್‌ ರೆಡ್ಡಿ ಅವರು, ‘ಅವರು ಏಕೆ ಸದನದಿಂದ ನುಣುಚಿಕೊಳ್ಳುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ನಾಯ್ಡು ಅವರು ಸದನದಿಂದ ದೂರ ಉಳಿಯುತ್ತಿರುವುದು ಕುಪ್ಪಂ ಪರಿಣಾಮ ಎಂದು ನಮ್ಮ ಪಕ್ಷದ ಶಾಸಕರು ತಿಳಿಸಿದರು. ಈಗಲಾದರೂ ಮಾಜಿ ಮುಖ್ಯಮಂತ್ರಿ ತಮ್ಮ ತಪ್ಪು ಅರಿತುಕೊಳ್ಳಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.

ಬುಧವಾರ ಕುಪ್ಪಂ ನಗರಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ ಟಿಡಿಪಿ ಹೀನಾಯ ಸೋಲು ಅನುಭವಿಸಿತ್ತು. ನಾಯ್ಡು ಅವರು ಆರು ಅವಧಿಗಳಿಂದ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಗೆ ಇದು ಬರಲಿದೆ.

ಸರ್ಕಾರದ ಅಭಿವೃದ್ಧಿ ಯೋಜನೆಗಳ ಲಾಭ ಪಡೆದಿರುವ ಕುಪ್ಪಂನ ಮಹಿಳೆಯರು ಚಂದ್ರಬಾಬು ನಾಯ್ಡು ಅವರಿಗೆ ಪಾಠ ಕಲಿಸಿದ್ದಾರೆ. ಇನ್ನಾದರೂ ಹಿತಾಸಕ್ತಿ ಅರ್ಜಿ ಹಾಕುವ ಮೂಲಕ ಕಾರ್ಯಕ್ರಮಗಳಿಗೆ ಅವರು ತಡೆಯೊಡ್ಡದಿರಲಿ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT