ತಿರುಪತಿ: ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಪೊಲೀಸರ ವಶಕ್ಕೆ

ತಿರುಪತಿ: ತಿರುಪತಿ ನಗರಕ್ಕೆ ಪ್ರವೇಶ ನಿಷೇಧಿಸಿರುವುದನ್ನು ವಿರೋಧಿಸಿ ಸಮೀಪದ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಸೋಮವಾರ ಬಂಧಿಸಿದರು.
ಬಂಧನದ ವೇಳೆ ಚಂದ್ರಬಾಬು ನಾಯ್ಡು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ‘ತಿರುಪತಿ ಮತ್ತು ಚಿತ್ತೂರು ನಗರ ಪ್ರವೇಶಿಸದಂತೆ ನನಗೆ ಏಕೆ ನಿರ್ಬಂಧ ಹೇರಿದ್ದಾರೆ ಎಂಬುದನ್ನು ತಿಳಿಸಬೇಕು‘ ಎಂದು ನಾಯ್ಡು ಒತ್ತಾಯಿಸಿದರು.
‘ನಾನು 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೆ. ಈಗ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಪ್ರತಿಭಟಿಸುವ ಹಕ್ಕು ನನಗಿಲ್ಲವೇ? ನಾನು ಜಿಲ್ಲಾಧಿಕಾರಿ ಮತ್ತು ಎಸ್‌ಪಿಯನ್ನು ಭೇಟಿಯಾಗಲು ಏಕೆ ಸಾಧ್ಯವಿಲ್ಲ‘ ಎಂದು ನಾಯ್ಡು ಕೋಪದಿಂದ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರು. ನಂತರ ವಿಮಾನ ನಿಲ್ದಾಣದ ವಿಶ್ರಾಂತಿ ಮಹಡಿಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ಘಟನೆಯ ಹಿನ್ನೆಲೆ :
ತೆಲುಗು ದೇಶಂ ಪಕ್ಷದ ನಾಯಕನಿಗೆ ಸೇರಿದ ಚಹಾ ಅಂಗಡಿಯೊಂದನ್ನು ಭಾನುವಾರ ತಿರುಪತಿ ಮಹಾನಗರ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ತೆರೆವುಗೊಳಿಸಿದ್ದರು. ಇವರ ಪತ್ನಿ ಇದೇ ಮಾ.10ರಂದು ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪಾಲಿಕೆ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಟಿಡಿಪಿ ನಾಯಕರು, ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ತಿರುಪತಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ನಿಂದ ತಿರುಪತಿಗೆ ವಿಮಾನದಲ್ಲಿ ಆಗಮಿಸಿದ್ದ ನಾಯ್ಡು ಅವರನ್ನು ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದರು. ಪೊಲೀಸರ ಕ್ರಮ ವಿರೋಧಿಸಿ, ವಿಮಾನ ನಿಲ್ದಾಣದಲ್ಲೇ ನಾಯ್ಡು ಪ್ರತಿಭಟನೆ ನಡೆಸಲು ಮುಂದಾದರು.
ಇದಕ್ಕೂ ಮೊದಲು ಪೊಲೀಸರು, ನಗರ ಸ್ಥಳೀಯ ಸಂಸ್ಥೆಯ ಮಾದರಿ ನೀತಿ ಸಂಹಿತೆ ಮತ್ತು ಕೊರೊನಾ ಮಾರ್ಗಸೂಚಿಗಳ ಕಾರಣ ನೀಡಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರು. ನಾಯ್ಡು ಅವರ ಆಗಮನಕ್ಕೂ ಮುನ್ನ ತಿರುಪತಿ ಮತ್ತು ಚಿತ್ತೂರು ಪೊಲೀಸರು ಜಿಲ್ಲೆಯ ಪ್ರಮುಖ ಟಿಡಿಪಿ ನಾಯಕರನ್ನು ಗೃಹಬಂಧನದಲ್ಲಿರಿಸಿದರು.
ಟಿಡಿಪಿ ಪಾಲಿಟ್ ಬ್ಯೂರೊ ಸದಸ್ಯ ಯನಮಾಲಾ ರಾಮಕೃಷ್ಣಡು ಅವರು ಪೊಲೀಸರು ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.