ಗುರುವಾರ , ಮಾರ್ಚ್ 23, 2023
28 °C

ತೆಲಂಗಾಣ: ರಾಜಭವನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದ ಸಿ.ಎಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ತೆಲಂಗಾಣದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಭಿನ್ನಾಭಿಪ್ರಾಯ ಗುರುವಾರ ಮತ್ತೊಮ್ಮೆ ಪ್ರಕಟಗೊಂಡಿದ್ದು, ಗಣರಾಜ್ಯೋತ್ಸವದ ಅಂಗವಾಗಿ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ದೂರ ಉಳಿದಿದ್ದಾರೆ.

ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಗಳ ಪ್ರಕಾರ ಗಣರಾಜ್ಯೋತ್ಸವವನ್ನು ಭವ್ಯವಾಗಿ ಆಚರಿಸಬೇಕು ಎಂದು ಬುಧವಾರ ತೆಲಂಗಾಣ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ ಈ ಬೆಳವಣಿಗೆ ನಡೆದಿದೆ.

ಚಂದ್ರಶೇಖರ ರಾವ್‌ ಅವರು ಗಣರಾಜ್ಯೋತ್ಸವದ ಅಂಗವಾಗಿ ತಮ್ಮ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿ ಧ್ವಜಾರೋಹಣ ಮಾಡಿದರು.

ಕಳೆದ ವರ್ಷ ಸ್ಫೋಟ: ಕಳೆದ ವರ್ಷ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಮೊಟಕುಗೊಂಡ ಬಳಿಕ ರಾಜ್ಯಪಾಲೆ ಮತ್ತು ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು.

2019ರಲ್ಲಿ ರಾಜ್ಯಪಾಲೆಯಾಗಿ ಅಧಿಕಾರ ವಹಿಸಿಕೊಂಡಿರುವ ತಮಿಳ್ಇಸೈ ಸೌಂದರರಾಜನ್‌ ಅವರು, ತಮ್ಮ ಕಚೇರಿಗೆ ಸಂಬಂಧಿಸಿದಂತೆ ಸರ್ಕಾರವು ಶಿಷ್ಟಾಚಾರಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದರು.

ತಾವು ಜಿಲ್ಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ಉಲ್ಲೇಖಿಸಿದ್ದ ಅವರು, ರಾಜಭವನಕ್ಕೆ ಗೌರವ ನೀಡಬೇಕು ಎಂದಿದ್ದರು. ಈ ಆರೋಪವನ್ನು ತಳ್ಳಿ ಹಾಕಿದ್ದ ಬಿಆರ್‌ಸ್‌, ತಮಿಳ್ಇಸೈ ಅವರು ರಾಜ್ಯಪಾಲೆಯಾಗುವುದಕ್ಕಿಂತ ಮೊದಲು ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷೆಯಾಗಿದ್ದರು ಎಂದು ಹೇಳಿತ್ತು.

ಕೆ. ಚಂದ್ರಶೇಖರ ರಾವ್‌ ನೇತೃತ್ವದ ಸರ್ಕಾರವು ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿರುವ ಸಂಶಯವಿದೆ ಎಂದು ತಮಿಳ್ಇಸೈ ಅವರು ಕಳೆದ ವರ್ಷ ಗಂಭೀರ ಆರೋಪ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು