ರಾತ್ರೋರಾತ್ರಿ ಮಹಿಳಾ ಐಎಎಸ್ ಅಧಿಕಾರಿ ನಿವಾಸಕ್ಕೆ ನುಗ್ಗಿದ ಉಪ ತಹಶಿಲ್ದಾರ್

ಹೈದರಾಬಾದ್: ತೆಲಂಗಾಣದ ಮಹಿಳಾ ಐಎಎಸ್ ಅಧಿಕಾರಿ ಸ್ಮಿತಾ ಸಭರ್‌ವಾಲ್ ಅವರ ನಿವಾಸಕ್ಕೆ ನುಗ್ಗಿದ ಆರೋಪದ ಮೇಲೆ ಸರ್ಕಾರಿ ಅಧಿಕಾರಿಯೊಬ್ಬರನ್ನು ಹೈದರಾಬಾದ್‌ನಲ್ಲಿ ಶನಿವಾರ ರಾತ್ರಿ ಬಂಧಿಸಲಾಗಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಕಾರ್ಯದರ್ಶಿಯೂ ಆಗಿರುವ ಸ್ಮಿತಾ, ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ಮನೆಗೆ ವ್ಯಕ್ತಿಯೊಬ್ಬರು ನುಗ್ಗಿರುವುದನ್ನು ಗಮನಿಸಿದ್ದಾರೆ. ಬಳಿಕ ಅವರು ನೀಡಿದ ಎಚ್ಚರಿಕೆಯ ಅನುಸಾರ, ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ವ್ಯಕ್ತಿ ಡೆಪ್ಯುಟಿ ತಹಶಿಲ್ದಾರ್ ಆನಂದ್ ರೆಡ್ಡಿ ಎಂಬುದು ಬಳಿಕ ತಿಳಿದುಬಂದಿದೆ. ಐಎಎಸ್ ಅಧಿಕಾರಿಯ ಮನೆಯ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ರೆಡ್ಡಿ ಅವರ ಸ್ನೇಹಿತನನ್ನೂ ಸೆರೆ ಹಿಡಿಯಲಾಗಿದೆ.
ಈ ವಿಚಾರವನ್ನು ಸ್ಮಿತಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ವ್ಯಕ್ತಿಯೊಬ್ಬ ಮನೆಗೆ ನುಗ್ಗಿದದಂತಹ ಆಘಾತಕಾರಿ ಅನುಭವ ಕಳೆದ ರಾತ್ರಿ ಆಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಜೀವ ಉಳಿಸಿಕೊಳ್ಳಲು ಜಾಗರೂಕಳಾಗಿ, ಸಾವಧಾನವಾಗಿ ಇದ್ದೆ. ಇದರಿಂದ ಕಲಿತ ಪಾಠಗಳು: ನೀವು ಎಷ್ಟೇ ಸುರಕ್ಷಿತವಾಗಿದ್ದೀರಿ ಎಂದು ಭಾವಿಸಿದರೂ ಮನೆಯ ಬಾಗಿಲುಗಳು/ಬೀಗಗಳನ್ನು ಯಾವಾಗಲೂ ಪರಿಶೀಲಿಸಿ' ಎಂದು ತಿಳಿಸಿದ್ದಾರೆ. ಹಾಗೆಯೇ ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆಗೆ (100ಕ್ಕೆ) ಕರೆ ಮಾಡುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಮೆದ್‌ಚಾಲ್ ಮಲ್ಕಜಗಿರಿ ಜಿಲ್ಲೆಯಲ್ಲಿ ಡೆಪ್ಯುಟಿ ತಹಶಿಲ್ದಾರ್ ಆಗಿರುವ ಆನಂದ್ ರೆಡ್ಡಿ ಹಾಗೂ ಅವರ ಸ್ನೇಹಿತನ ವಿರುದ್ಧ ಸ್ಮಿತಾ ಅವರು ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರಮೋಷನ್‌ಗೆ ಸಂಬಂಧಿಸಿದ ವಿಚಾರವಾಗಿ ಚರ್ಚಿಸಲು ಸ್ಮಿತಾ ಅವರ ನಿವಾಸಕ್ಕೆ ತೆರಳಿದ್ದಾಗಿ ರೆಡ್ಡಿ ಹೇಳಿಕೆ ನೀಡಿದ್ದಾರೆ.
Had this most harrowing experience, a night back when an intruder broke into my house. I had the presence of mind to deal and save my life.
Lessons: no matter how secure you think you are- always check the doors/ locks personally.#Dial100 in emergency— Smita Sabharwal (@SmitaSabharwal) January 22, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.