ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ಮಹಾರಾಜ’ರ ಒಡೆತನದ 1563 ಎಕರೆ ಭೂಮಿ; ಸುಪ್ರೀಂ ಮೊರೆ ಹೋದ ರಾಜ್ಯ ಸರ್ಕಾರ

Last Updated 7 ಮಾರ್ಚ್ 2021, 15:49 IST
ಅಕ್ಷರ ಗಾತ್ರ

ನವದೆಹಲಿ: ಮೈಸೂರಿನಲ್ಲಿರುವ ಅಪಾರ ಪ್ರಮಾಣದ ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ಇತ್ತೀಚೆಗೆ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದೆ.

1950ರ ವಿಲೀನ ಒಪ್ಪಂದದ ಪ್ರಕಾರ ಮೈಸೂರಿನಲ್ಲಿರುವ 1561.31 ಎಕರೆ ಜಮೀನಿನ ಒಡೆತನ ‘ಮೈಸೂರಿನ ಮಹಾರಾಜ’ರಿಗೆ ಸೇರಿದ್ದು ಎಂದು 2020ರ ಡಿಸೆಂಬರ್‌ 19ರಂದು ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿರುವ ಆದೇಶದ ಸಿಂಧುತ್ವವನ್ನು ರಾಜ್ಯ ಸರ್ಕಾರ ಪ್ರಶ್ನಿಸಿದೆ.

ಬ್ರಿಟಿಷ್ ಸರ್ಕಾರವು ಈ ಜಮೀನನ್ನು ಖರಾಬ್‌ ಜಮೀನು (ಸಾರ್ವಜನಿಕ ಆಸ್ತಿ) ಎಂದು, ಸತತ ಎರಡು ವರ್ಷಗಳ ಕಾಲ ಸಮೀಕ್ಷೆ ನಡೆಸಿ 1883ರಲ್ಲಿಯೇ ಘೋಷಿಸಿದೆ. 1921ರಲ್ಲಿ ಇದನ್ನು ‘ಖರಾಬ್‌ ಜಮೀನು’ ಎಂದು ವರ್ಗೀಕರಿಸಿ ಆದೇಶಿಸಿದೆ. ಆದರೂ, ಕೇಂದ್ರ ಸರ್ಕಾರದ 1950ರ ವಿಲೀನ ಒಪ್ಪಂದದ ಪ್ರಕಾರ ಮೈಸೂರಿನ ಮಹಾರಾಜರ ಒಡೆತನಕ್ಕೆ ಈ ಜಮೀನನ್ನು ನೀಡಲಾಗಿದೆ. ಖರಾಬ್‌ ಜಮೀನು ಮತ್ತು ಒಡೆತನ ಕುರಿತ ವ್ಯಾಖ್ಯಾನವನ್ನು ಹೈಕೋರ್ಟ್‌ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಖರಾಬ್ ಜಮೀನನ್ನು ಒಡೆತನದೊಂದಿಗೆ ವರ್ಗೀಕರಿಸುವ ನಿಟ್ಟಿನಲ್ಲಿ ತಪ್ಪಾದ ಆದೇಶ ರವಾನಿಸಿರುವ ಹೈಕೋರ್ಟ್‌ ಗಂಭೀರ ಪ್ರಮಾದ ಎಸಗಿದೆ ಎಂದು ದೂರಲಾಗಿದೆ. ಅಲ್ಲದೆ, ವಿವಾದಿತ ಜಮೀನಿನ ಪೈಕಿ 600 ಎಕರೆ ಜಮೀನು, ಜನವಸತಿ ಪ್ರದೇಶ ಹಾಗೂ ಸಾರ್ವಜನಿಕ ಬಳಕೆಗೆ ಮೀಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

1950ರ ಜನವರಿ 23ರಂದು ಏರ್ಪಟ್ಟಿರುವ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮೂರು ವಾರಗಳೊಳಗೆ ಸಲ್ಲಿಸುವಂತೆ ರಾಜ್ಯ ಸರ್ಕಾರದ ಪರ ವಕೀಲ ಹರೀಶ್‌ ಸಾಳ್ವೆ ಅವರಿಗೆ ಸೂಚಿಸಿರುವ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ, ಏಪ್ರಿಲ್‌ 12ರಂದು ವಿಚಾರಣೆ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT