ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14 ತಿಂಗಳ ಕಾಲ ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು?: ಮದ್ರಾಸ್‌ ಹೈಕೋರ್ಟ್ ತರಾಟೆ

ಕೋವಿಡ್‌ ನಿಯಂತ್ರಿಸಲು ವಿಫಲ
Last Updated 29 ಏಪ್ರಿಲ್ 2021, 16:31 IST
ಅಕ್ಷರ ಗಾತ್ರ

ಚೆನ್ನೈ: ಕೋವಿಡ್‌–19 ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಮದ್ರಾಸ್‌ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

‘14 ತಿಂಗಳ ಕಾಲ ಸರ್ಕಾರ ಏನು ಮಾಡುತ್ತಿತ್ತು’ ಎಂದು ನ್ಯಾಯಾಲಯ ಕಟುವಾಗಿ ಪ್ರಶ್ನಿಸಿದೆ.

‘ತಜ್ಞರ ಸಲಹೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕೇ ಹೊರತು ತಾತ್ಕಾಲಿಕ ಉದ್ದೇಶಕ್ಕಾಗಿ ಅಲ್ಲ. ನಮಗೆ ಒಂದು ವರ್ಷ ಸಮಯಾವಕಾಶವಿತ್ತು. ಆದರೆ, ಈಗ ಏಪ್ರಿಲ್‌ ತಿಂಗಳಲ್ಲಿ ದಿಢೀರನೆ ಎಚ್ಚೆತ್ತುಕೊಂಡಿದ್ದೀರಿ’ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಬ್ಯಾನರ್ಜಿ ಹೇಳಿದ್ದಾರೆ.

ವೈರಸ್‌ನ ಎರಡನೇ ಅಲೆ ಬರುವುದು ಅನಿರೀಕ್ಷಿತವಾಗಿತ್ತು ಎಂದು ಹೆಚ್ಚುವರಿ ಸಾಲಿಸಿಟರಲ್‌ ಜನರಲ್‌ ಆರ್‌. ಶಂಕರನಾರಾಯಣ ಅವರು ಹೇಳಿಕೆಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಲಸಿಕೆಗಳಿಗೆ ಯಾವ ಮಾನದಂಡಗಳ ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ ಮತ್ತು ಕೋವಿನ್‌ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. ಈ ಬಗ್ಗೆ ಶುಕ್ರವಾರ ಉತ್ತರ ನೀಡುವುದಾಗಿ ಹೆಚ್ಚುವರಿ ಸಾಲಿಸಿಟರಲ್‌ ಜನರಲ್‌ ಉತ್ತರಿಸಿದರು.

ಮುಖ್ಯ ನ್ಯಾಯಮೂರ್ತಿ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಸೆಂಥಿಲ್‌ ಕುಮಾರ್‌ ರಾಮಮೂರ್ತಿ ಅವರನ್ನೊಳಗೊಂಡ ಪೀಠವು ರೆಮ್‌ಡಿಸಿವಿರ್‌ ಲಸಿಕೆ ಕೊರತೆಯ ಬಗ್ಗೆ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಿತು. ದಿನಪತ್ರಿಕೆಗಳ ವರದಿಗಳ ಆಧಾರದ ಮೇಲೆ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡಿದೆ.

ಲಾಕ್‌ಡೌನ್‌ ಅಗತ್ಯವಿಲ್ಲ: ಮೇ 1 ಮತ್ತು 2ರಂದು ರಜೆ ಇರುವುದರಿಂದ ಆ ದಿನಗಳಂದು ಲಾಕ್‌ಡೌನ್‌ ಜಾರಿಗೊಳಿಸುವ ಅಗತ್ಯ ಇಲ್ಲ ಎಂದು ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳೂ ಹೈಕೋರ್ಟ್‌ಗೆ ವಿವರಣೆ ನೀಡಿವೆ. ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಪರಿಶೀಲಿಸಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿತ್ತು. ಹೀಗಾಗಿ, ಈ ವಿವರಣೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT