ಗುರುವಾರ , ಜನವರಿ 28, 2021
15 °C

ಯಾವುದೇ ನಿರ್ಧಾರಕ್ಕೆ ಬರದೆ ರೈತರು–ಸಚಿವರ ಮಾತುಕತೆ ಅಂತ್ಯ: ಜ.8ಕ್ಕೆ ಮತ್ತೆ ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ನಿರಂತರ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಮತ್ತು ಮೂವರು ಕೇಂದ್ರ ಸಚಿವರ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 7ನೇ ಸುತ್ತಿನ ಮಾತುಕತೆಯೂ ಯಾವುದೇ ನಿರ್ಧಾರಕ್ಕೆ ಬರದೆ ಅಂತ್ಯಗೊಂಡಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದ, ವಾಣಿಜ್ಯ ಇಲಾಖೆಯ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ವಿಜ್ಞಾನ ಭವನದಲ್ಲಿ 41 ರೈತ ಸಂಘಗಳ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದರು.

ಸಭೆ ಆರಂಭದಿಂದಲೂ ರೈತರು ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ಪಟ್ಟು ಹಿಡಿದಿದ್ದರು, ಹೊಸ ಕೃಷಿ ಕಾಯ್ದೆಗಳ ಅನುಕೂಲತೆಗಳನ್ನು ಪಟ್ಟಿ ಮಾಡಿ ರೈತರ ಮುಂದಿಟ್ಟರೂ ಯಾವುದೇ ಪ್ರಯೋಜನ ಆಗಲಿಲ್ಲ. ಮುಂದಿನ ಮಾತುಕತೆ ಜನವರಿ 8ರಂದು ನಡೆಯಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಕೇವಲ ಒಂದು ಗಂಟೆ ಮಾತುಕತೆ ಬಳಿಕ ಎರಡೂ ಕಡೆಯಿಂದ ದೀರ್ಘ ವಿರಾಮ ಪಡೆಯಲಾಗಿತ್ತು. ಈ ಸಂದರ್ಭ ಪ್ರತಿಭಟನಾನಿರತ ರೈತರು ಸರ್ಕಾರದ ಊಟವನ್ನು ತಿರಸ್ಕರಿಸಿ ಕ್ಯಾಂಟಿನ್‌ನಲ್ಲಿ ತಯಾರಿಸಿದ್ದ ಊಟವನ್ನೇ ಸೇವಿಸಿದರು. ಈ ಹಿಂದಿನ ಮಾತುಕತೆ ಸಂದರ್ಭದಲ್ಲೂ ರೈತರು ಇದೇ ರೀತಿ ಮಾಡಿದ್ದರು.

ಮತ್ತೆ ಸಂಜೆ 5.15ರ ಹೊತ್ತಿಗೆ ರೈತ ಮುಖಂಡರು ಮತ್ತು ಸಚಿವರ ನಡುವೆ ಮಾತುಕತೆ ಆರಂಭವಾಯಿತು. ಆದರೆ, ರೈತರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕೆಂಬ ತಮ್ಮ ನಿರ್ಧಾರಕ್ಕೆ ಪಟ್ಟು ಹಿಡಿದು ಕುಳಿತರು. ಅಂತಿಮವಾಗಿ, ಸಭೆ ಯಾವುದೇ ನಿರ್ಧಾರಕ್ಕೆ ಬರದೆ ಅಂತ್ಯವಾಯಿತು.

ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಆಂತರಿಕ ಚರ್ಚೆ ನಡೆಸಿ ಬಳಿಕ ನಮ್ಮ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಈ ಮಧ್ಯೆ, ಮಂಗಳವಾರ ಸಭೆ ನಡೆಸಲಿರುವ ಸಚಿವರು, ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ಸೋಮವಾರ ನಡೆದ ಸಭೆಯಲ್ಲಿ ರೈತರ ಪ್ರಮುಖ ಬೇಡಿಕೆಗಳಲ್ಲೊಂದಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಕುರಿತಂತೆ ಎರಡೂ ಕಡೆಯಿಂದಲೂ ಮಾತುಕತೆ ನಡೆಯಲೇ ಇಲ್ಲ.

ಮೂರೂ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ದೆಹಲಿಯ ಗಡಿಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ತಿಂಗಳಿಗಿಂತಲೂ ಅಧಿಕ ಸಮಯದಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಕೊರೆವ ಚಳಿ, ಕಳೆದ ಎರಡು ದಿನಗಳಿಂದ ಅಧಿಕ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದರೂ ಯಾವುದಕ್ಕೂ ಜಗ್ಗದೆ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು