ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮೂಲದವರಿಂದ ₹4,200 ಕೋಟಿ ವಂಚನೆ ಪತ್ತೆ ಮಾಡಿದ ಯುಪಿ ಪೊಲೀಸರು

Last Updated 9 ಸೆಪ್ಟೆಂಬರ್ 2022, 16:20 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಪೊಲೀಸರ ಅಪರಾಧ ವಿಭಾಗವು ದೇಶದಲ್ಲಿ ಚೀನಾ ಮೂಲದ ಕ್ರಿಮಿನಲ್‌ಗಳು ನಡೆಸಿರುವ ₹4,200 ಕೋಟಿ ಪ್ಯಾನ್-ಇಂಡಿಯಾ ವಂಚನೆಗಳನ್ನು ಬಯಲಿಗೆಳೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಕ್ರಿಪ್ಟೊ ಟ್ರೇಡಿಂಗ್, ತ್ವರಿತ ಸಾಲ ನೀಡುವ ಅಪ್ಲಿಕೇಶನ್‌ಗಳು ಮತ್ತು ಎಸ್‌ಎಂಎಸ್‌ಗಳ ಮೂಲಕ ನಕಲಿ ಉದ್ಯೋಗ ಜಾಹೀರಾತುಗಳಿಗೆ ಸಂಬಂಧಿಸಿದ ವಂಚನೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ಉತ್ತರ ಪ್ರದೇಶ ಅಪರಾಧ ದಳದ ಎಸ್‌ಪಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.

ತ್ವರಿತ ಸಾಲ ನೀಡುವ ಅಪ್ಲಿಕೇಶನ್‌ಗಳು ಮತ್ತು ಪ್ರಮುಖ ಕಂಪನಿಗಳಲ್ಲಿ ಅರೆಕಾಲಿಕ ಉದ್ಯೋಗದ ಆಫರ್‌ಗಳ ಮೂಲಕ ದೇಶದಾದ್ಯಂತ ಜನರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸುತ್ತಿರುವ ಚೀನಾ ಮೂಲದ ಆಪರೇಟರ್‌ಗಳ ಲಿಂಕ್ ಅನ್ನು ಪೊಲೀಸರು ಈ ವರ್ಷದ ಆರಂಭದಲ್ಲಿ ಪತ್ತೆಹಚ್ಚಿದ್ದರು ಎಂದು ಅವರು ಹೇಳಿದ್ದಾರೆ.

‘ನಾವು ಈ ಹಿಂದೆ ಚೀನಾದ ಆಪರೇಟರ್‌ಗಳಿಂದ ನಡೆದಿರುವ ಸುಮಾರು ₹ 3,000 ಕೋಟಿ ಮೌಲ್ಯದ ವಂಚನೆಯನ್ನು ಪತ್ತೆಹಚ್ಚಿದ್ದೆವು. ಆದರೆ, ಈಗ ನಕಲಿ ವೆಬ್‌ಸೈಟ್‌ಗಳ ಮೂಲಕ ಕ್ರಿಪ್ಟೊ ಕರೆನ್ಸಿ ವ್ಯಾಪಾರದ ಹೆಸರಲ್ಲಿ ವಂಚನೆ ಎಸಗಿರುವುದನ್ನು ಪತ್ತೆ ಮಾಡಲಾಗಿದೆ’ ಎಂದು ಸಿಂಗ್ ಪಿಟಿಐಗೆ ತಿಳಿಸಿದರು.

ಈ ವ್ಯಕ್ತಿಗಳು ನಕಲಿ ವೆಬ್‌ಸೈಟ್ ಮತ್ತು ಆ್ಯಪ್‌ಗಳ ಮೂಲಕ ಕ್ರಿಪ್ಟೊ ಟ್ರೇಡಿಂಗ್ ಹೆಸರಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿ ಎಂದು ಜನರನ್ನು ನಂಬಿಸಿ ವಂಚನೆ ಮಾಡಿದ್ದಾರೆ. ಅವರು ತೋರಿಸಿದ ಲಾಭಾಂಶವು ವೆಬ್‌ಸೈಟ್ ಮತ್ತು ಆ್ಯಪ್‌ಗಳಲ್ಲಿ ಮಾತ್ರವಿದ್ದು, ಜನರಿಗೆ ಸಿಕ್ಕಿಲ್ಲ ಎಂದು ಎಸ್‌ಪಿ ವಿವರಿಸಿದ್ದಾರೆ.

ವಂಚಕರು ಜನರಿಂದ ಪಡೆಯುವ ಹಣವು ಮೊದಲು ಸ್ಥಳೀಯ ಭಾರತೀಯ ಬ್ಯಾಂಕ್ ಖಾತೆಗಳಿಗೆ ಹೋಗಿ, ಬಳಿಕ ವಂಚಕರ ಡಿಜಿಟಲ್ ವ್ಯಾಲೆಟ್‌ ಹೋಗಿದೆ ಎಂದು ಅವರು ಹೇಳಿದ್ದಾರೆ.

ಇದೊಂದು ದೊಡ್ಡ ದಂಧೆಯಾಗಿದ್ದು, ಕೆಲವು ನಿರ್ವಾಹಕರು ನೇಪಾಳದಲ್ಲಿದ್ದಾರೆ. ಆದರೆ, ಚೀನಾದಿಂದ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇಂತಹ ವಂಚನೆಗಳ ಬಗ್ಗೆ ಗಮನಹರಿಸಿದೆ ಮತ್ತು ಅವುಗಳನ್ನು ಪರಿಶೀಲಿಸಲು ಸಂಬಂಧಿಸಿದ ಏಜೆನ್ಸಿಗಳಿಗೆ ನಿರ್ದೇಶನ ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.

‘ತುರ್ತು ಸಾಲ ಆ್ಯಪ್‌ಗಳು, ಅರೆಕಾಲಿಕ ಉದ್ಯೋಗ ಮತ್ತು ಕ್ರಿಪ್ಟೋ ಟ್ರೇಡಿಂಗ್ ವಂಚನೆ, ಇವೆಲ್ಲವನ್ನೂ ಚೀನಾದ ಅದೇ ಹ್ಯಾಕರ್‌ಗಳು ನಿರ್ವಹಿಸುತ್ತಿದ್ದಾರೆ. ಎಸ್‌ಎಂಎಸ್ ಅಗ್ರಿಗೇಟರ್‌ಗಳು ಸಹ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ತ್ರಿವೇಣಿ ಸಿಂಗ್ ಹೇಳಿದರು.

‘ಈ ವಂಚನೆಯು ಇಲ್ಲಿಯವರೆಗೆ ₹4,200 ಕೋಟಿ ಮೌಲ್ಯದ್ದಾಗಿದೆ ಮತ್ತು ಚೀನಾದ ಆಪರೇಟರ್‌ಗಳೊಂದಿಗೆ ಸಂಪರ್ಕ ಹೊಂದಿದೆ’ಎಂದು ಅವರು ತಿಳಿಸಿದರು.

ಆನ್‌ಲೈನ್ ವಹಿವಾಟಿನ ಬಗ್ಗೆ ಎಚ್ಚರವಹಿಸುವಂತೆ ಜನರಿಗೆ ಉತ್ತರ ಪ್ರದೇಶ ಪೊಲೀಸರು ಮನವಿ ಮಾಡಿದ್ದು, ವಂಚನೆ ಕಂಡುಬಂದರೆ ಹೆಲ್ಪ್‌ಲೈನ್ ಸಂಖ್ಯೆ 1930 ಅನ್ನು ಸಂಪರ್ಕಿಸುವಂತೆ ಮನವಿ ಮಾಇದ್ದಾರೆ.

ಪಾರ್ಟ್‌ಟೈಮ್ ಕೆಲಸ ಅಥವಾ ತುರ್ತು ಸಾಲ ಅಥವಾ ಕ್ರಪ್ಟೋ ಕರೆನ್ಸಿ ವ್ಯಾಪಾರದಿಂದ ಅಧಿಕ ಲಾಭಾಂಶದ ಆಫರ್‌ಗಳು ಬಂದರೆ ಅವುಗಳಲ್ಲಿ ಚೀನಾ ಮೂಲದವರಿಂದ ವಂಚನೆಯ ಸಾಧ್ಯತೆ ಹೆಚ್ಚಿರುತ್ತದೆ. ಜನರು ಜಾಗರೂಕತೆಯಿಂದ ಇರಬೇಕಾದ ಅಗತ್ಯವಿದೆ ಎಂದು ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT