ಬುಧವಾರ, ಸೆಪ್ಟೆಂಬರ್ 29, 2021
20 °C

ಝೀಕಾದಿಂದ ಚೇತರಿಕೆಗೆ ಪ್ಯಾರಾಸಿಟಮಾಲ್ ಸಾಕೆಂದ ತಜ್ಞ: ಪುಣೆಯಲ್ಲಿ ಕಟ್ಟೆಚ್ಚರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಝೀಕಾ ವೈರಸ್ ಈಡಿಸ್ ಈಜಿಪ್ಟಿ ಸೊಳ್ಳೆಯ ಕಡಿತದ ಮೂಲಕ ಹರಡುತ್ತದೆ ಮತ್ತು ಹೆಚ್ಚಿನ ರೋಗಿಗಳಿಗೆ ಯಾವುದೇ ಲಕ್ಷಣಗಳಿರುವುದಿಲ್ಲ. ಜ್ವರ, ದೇಹದ ನೋವು ಇದರ ಮೂಲ ಲಕ್ಷಣವಾಗಿದೆ. ಜನರು ಭಯಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರದ ಕಣ್ಗಾವಲು ಅಧಿಕಾರಿ ಡಾ.ಪ್ರದೀಪ್ ಅವಟೆ ಪಿಟಿಐಗೆ ತಿಳಿಸಿದ್ದಾರೆ.

‘ಶೇಕಡಾ 80 ರಷ್ಟು ರೋಗಿಗಳಿಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ ಮತ್ತು ಉಳಿದ 20 ಪ್ರತಿಶತದಷ್ಟು ಜನರು ಮಧ್ಯಮ ಜ್ವರ ತರಹದ ರೋಗಲಕ್ಷಣಗಳನ್ನು ಹೊಂದಿರುವುದರಿಂದ ಝಿಕಾ ಒಂದು ಮಧ್ಯಮ ಕಾಯಿಲೆಯಾಗಿದೆ. ಸಾಕಷ್ಟು ನೀರು ಕುಡಿಯುವುದು, ವಿಶ್ರಾಂತಿ ತೆಗೆದುಕೊಳ್ಳುವುದು ಮತ್ತು ಸರಳವಾದ ಪ್ಯಾರಾಸಿಟಮಾಲ್ ಟ್ಯಾಬ್ಲೆಟ್ ಅನ್ನು ಸೇವಿಸುವುದರಿಂದ ಚೇತರಿಸಿಕೊಳ್ಳಬಹುದು.’ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಇತ್ತೀಚೆಗೆ ಮಹಿಳೆಗೆ ಝೀಕಾ ವೈರಸ್ ತಗುಲಿರುವುದು ದೃಢಪಟ್ಟ ಪುಣೆ ಜಿಲ್ಲೆಯಲ್ಲಿ ಮೂವರು ಸದಸ್ಯರ ಕೇಂದ್ರ ತಂಡ ಬೀಡು ಬಿಟ್ಟಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ಸೊಳ್ಳೆಯಿಂದ ಹರಡುವ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಲ್ಲಿ ಝೀಕಾ ಸೋಂಕು ತಗುಲಿದ್ದ 50 ವರ್ಷದ ಮೊದಲ ಮಹಿಳೆ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಕಳೆದ ವಾರ ಹೇಳಿತ್ತು.

ಪುರಂದರ ತಾಲೂಕಿನ ವ್ಯಾಪ್ತಿಯ ಹಳ್ಳಿಯಲ್ಲಿ ಝೀಕಾ ವೈರಸ್ ಪ್ರಕರಣ ಪತ್ತೆಯಾದ ನಂತರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯ ಕಳುಹಿಸಿರುವ ತಂಡವು ಪುಣೆ ಜಿಲ್ಲೆಗೆ ಭೇಟಿ ನೀಡುತ್ತಿದೆ ಎಂದು ಟೋಪೆ ಹೇಳಿದರು. ‘ಸೊಳ್ಳೆ ಸಂತಾನೋತ್ಪತ್ತಿ ಪ್ರದೇಶಗಳು ನಾಶವಾಗುತ್ತಿವೆ ಮತ್ತು ರೋಗಿಗಳ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ರೋಗ ಹರಡದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.' ಎಂದು ಅವರು ತಿಳಿಸಿದರು

ಮೂವರು ಸದಸ್ಯರ ತಂಡವು ಪುಣೆಯ ಪ್ರಾದೇಶಿಕ ನಿರ್ದೇಶಕರ ಕಚೇರಿಯ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿದೆ. ನವದೆಹಲಿಯಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ತಜ್ಞರು ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್ (ಎನ್ಐಎಂಆರ್) ಕೀಟಶಾಸ್ತ್ರಜ್ಞರು ಇರಲಿದ್ದಾರೆ. ರಾಜ್ಯ ಸರ್ಕಾರದ ವೈದ್ಯಕೀಯ ತಂಡವು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಸರ್ಪಂಚ್ ಮತ್ತು ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿ ಮಾಡಿ ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು