ಮಂಗಳವಾರ, ಜೂನ್ 22, 2021
27 °C
ಕರ್ನಾಟಕಕ್ಕೆ ವಾರ್ಷಿಕ ಉಳಿತಾಯ ₹15.9 ಕೋಟಿ: ಪಿಆರ್‌ಎಸ್‌ ರಿಸರ್ಚ್

‘ಶಾಸಕರ ವೇತನ ಕಡಿತ ಪರಿಣಾಮ ನಗಣ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ವಿರುದ್ಧದ ಹೋರಾಟಕ್ಕಾಗಿ ಹೆಚ್ಚಿನ ಹಣ ಸಂಗ್ರಹಿಸುವ ಉದ್ದೇಶದಿಂದ ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಶಾಸಕರ ವೇತನ ಹಾಗೂ ಇತರ ಭತ್ಯೆಗಳಲ್ಲಿ ಕಡಿತ ಮಾಡುವುದಾಗಿ ಘೋಷಿಸಿದ್ದವು. ಆದರೆ ಈ ಮೂಲಕ ಸಂಗ್ರಹವಾದ ಹಣ ಅತ್ಯಲ್ಪ. ರಾಜ್ಯಗಳ ಆರ್ಥಿಕತೆಗೆ ಇದರಿಂದ ಹೇಳಿಕೊಳ್ಳಬಹುದಾದ ಯಾವುದೇ ಪರಿಣಾಮ ಉಂಟಾಗಿಲ್ಲ ಎಂದು ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆಯು ಹೇಳಿದೆ.

ಸಮೀಕ್ಷೆಯ ಪ್ರಕಾರ, ವೇತನ ಮತ್ತು ಭತ್ಯೆ ಕಡಿತದಿಂದ ಬಿಹಾರವು ಒಂದು ವರ್ಷದಲ್ಲಿ ₹2.1 ಕೋಟಿ ಉಳಿತಾಯ ಮಾಡಲಿದೆ. ಉತ್ತರ ಪ್ರದೇಶವು ಗರಿಷ್ಠ ₹17.4 ಕೋಟಿ, ಕರ್ನಾಟಕ ₹15.9 ಕೋಟಿ, ಗುಜರಾತ್‌ ₹5.8 ಕೋಟಿ, ಹಿಮಾಚಲ ಪ್ರದೇಶ ₹4.3 ಕೋಟಿ ಹಾಗೂ ಕೇರಳವು ₹3.1 ಕೋಟಿ ಮಾತ್ರ ಉಳಿತಾಯ ಮಾಡಲಿವೆ. ಇಂಥ ಕ್ರಮದಿಂದ ರಾಜ್ಯದ ಬಜೆಟ್‌ ವೆಚ್ಚದಲ್ಲಿ ಆಗುವ ಉಳಿತಾಯವು
ಶೇ 0.003ರಿಂದ ಶೇ 0.0009ನಷ್ಟು ಮಾತ್ರ ಎಂದು ಸಮೀಕ್ಷೆ ತಿಳಿಸಿದೆ.

ಆರು ರಾಜ್ಯಗಳಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಚಿವರು, ಸ್ಪೀಕರ್‌ ಹಾಗೂ ಮುಖ್ಯ ಸಚೇತಕರ ವೇತನವನ್ನು ಕಡಿತಗೊಳಿಸಲಾಗಿದೆ. ಬಿಹಾರದಲ್ಲಿ ವೇತನ ಹಾಗೂ ಭತ್ಯೆಗಳಲ್ಲಿ ಶೇ 15ರಷ್ಟು ಕಡಿತ ಮಾಡಿದ್ದರೆ, ಉಳಿದ ರಾಜ್ಯಗಳು ಶೇ 30ರಷ್ಟು ಕಡಿತ ಮಾಡಿದ್ದವು. ‘ಶಾಸಕರ ವೇತನ ಹಾಗೂ ಭತ್ಯೆಗಳ ಕಡಿತದಿಂದ ರಾಜ್ಯದ ಆರ್ಥಿಕತೆಯ ಮೇಲಾಗುವ ಪರಿಣಾಮ ನಗಣ್ಯ ಎಂಬುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ’ ಎಂದು ಸಮೀಕ್ಷೆ ಹೇಳಿದೆ.

ವಿವಿಧ ರಾಜ್ಯಗಳಲ್ಲಿ ಶಾಸಕರಿಗೆ ಬೇರೆಬೇರೆ ಪ್ರಮಾಣದಲ್ಲಿ ವೇತನ ನಿಗದಿ ಮಾಡಲಾಗಿದೆ. ಇದು ಕನಿಷ್ಠ ₹ 2,000 ದಿಂದ ₹ 78,800ರಷ್ಟಿದೆ. ರಾಜ್ಯಪಾಲರಿಗೆ ₹ 3.5 ಲಕ್ಷ, ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ₹ 2.5ಲಕ್ಷ, ಹೈಕೋರ್ಟ್‌ ನ್ಯಾಯಮೂರ್ತಿಗಳು, ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ತಲಾ ₹ 2.25 ಲಕ್ಷ ವೇತನ ನೀಡಲಾಗುತ್ತದೆ.

ಸಮೀಕ್ಷೆಯಲ್ಲಿ ಸಂಸದರ ವೇತನ ಕಡಿತವನ್ನು ಪರಿಗಣಿಸಲಾಗಿಲ್ಲ. ಜತೆಗೆ ಮುಂದಿನ ಎರಡು ವರ್ಷಗಳ ಅವಧಿಗೆ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನೂ ರದ್ದು ಮಾಡಲಾಗಿದ್ದು, ಅದನ್ನೂ ಗಣನೆಗೆ ತೆಗೆದುಕೊಂಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು