ಭಾನುವಾರ, ಜನವರಿ 23, 2022
27 °C

ಪ್ರಧಾನಿ ಮೋದಿ ಪ್ರಯಾಣಕ್ಕೆ ಭದ್ರತಾ ಲೋಪವಾಗಿಲ್ಲ: ಚರಣ್‌ಜಿತ್ ಸಿಂಗ್‌ ಚನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ: ‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಅಡ್ಡಿಯಾಗಿದ್ದಕ್ಕೆ ವಿಷಾದವಿದೆ. ಆದರೆ, ಇಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನಿ ಅವರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ’ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್‌ ಚನ್ನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರಧಾನಿ ಅವರ ರ‍್ಯಾಲಿಗೆ ಭದ್ರತೆ ಕೇಳಲಾಗಿತ್ತು. ಅದಕ್ಕೆ ಅಗತ್ಯವಿದ್ದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಪ್ರಧಾನಿ ಅವರು ರಸ್ತೆ ಮಾರ್ಗದಲ್ಲಿ ಹುಸೈನಿವಾಲಾಕ್ಕೆ ಹೋಗುವ ಕಾರ್ಯಕ್ರಮ ಮೂಲಪಟ್ಟಿಯಲ್ಲಿ ಇರಲಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿ ರಸ್ತೆ ಮಾರ್ಗದಲ್ಲಿ ಹೊರಟರು. ಪ್ರತಿಭಟನೆಯ ಕಾರಣ ರಸ್ತೆ ಬಂದ್ ಆಗಿತ್ತು. ಪ್ರತಿಭಟನಾಕಾರರನ್ನು ತೆರವು ಮಾಡಲು 20 ನಿಮಿಷವಾದರೂ ಬೇಕಿತ್ತು. ಪ್ರಧಾನಿ ಅವರಿಗೆ ಬದಲಿ ಮಾರ್ಗವನ್ನೂ ಸೂಚಿಸಿದೆವು. ಆದರೆ ಅವರು ವಾಪಸ್ಸಾಗಲು ನಿರ್ಧರಿಸಿದರು’ ಎಂದು ಚನ್ನಿ ಅವರು ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: 

 ಈ ಬಗ್ಗೆ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಸಹ ವಿವರಣೆ ನೀಡಿದ್ದಾರೆ. ‘ಪ್ರಧಾನಿ ಅವರ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಕೇಳಿದ್ದ ರೀತಿಯಲ್ಲಿ ಫಿರೋಜ್‌ಪುರದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ರ‍್ಯಾಲಿ ನಡೆಯಬೇಕಿದ್ದ ಸ್ಥಳದಲ್ಲೇ 10,000 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಪ್ರಧಾನಿ ಅವರ ರ‍್ಯಾಲಿಗೆ ರಾಜಸ್ಥಾನ ಮತ್ತು ಹರಿಯಾಣದಿಂದಲೂ ಸಾವಿರಾರು ಮಂದಿ ಬಸ್‌ನಲ್ಲಿ ಬರಬೇಕಿತ್ತು. ಆ ಬಸ್‌ಗಳ ಸುಗಮ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು’ ಎಂದು ಸುರ್ಜೇವಾಲಾ ಹೇಳಿದ್ದಾರೆ.

‘ಪ್ರಧಾನಿ ಅವರು ಬಟಿಂಡಾದಿಂದ ಹುಸೈನಿವಾಲಾಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ಕೊನೆಯ ಕ್ಷಣದಲ್ಲಿ ಅವರು ರಸ್ತೆ ಮಾರ್ಗದಲ್ಲಿ ಹೋಗಲು ನಿರ್ಧರಿಸಿದರು. ಪಂಜಾಬ್‌ನ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯು ಮೋದಿ ಅವರ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿತ್ತು. ಅವರು ಈ ಮೊದಲೇ ಪ್ರತಿಭಟನೆಗೆ ಕರೆ ನೀಡಿದ್ದರು. ಈ ಸಂಬಂಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಸಂಘಟನೆಯ ಜತೆಗೆ ಎರಡು ಬಾರಿ ಮಾತುಕತೆ ನಡೆಸಿದ್ದರು. ಅದು ವಿಫಲವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 

‘ಜನ ಇಲ್ಲದ್ದಕ್ಕೆ ರ‍್ಯಾಲಿ ರದ್ದು’

‘ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಬೇಕಿದ್ದ ಫಿರೋಜ್‌ಪುರ ರ‍್ಯಾಲಿಯಲ್ಲಿ ಜನರು ಸೇರಿರಲೇ ಇಲ್ಲ. 70,000 ಜನರು ಸೇರಲಿದ್ದಾರೆ ಎಂದು ಬಿಜೆಪಿ ಹೇಳಿತ್ತು. ಆದರೆ 700 ಜನರೂ ಅಲ್ಲಿರಲಿಲ್ಲ. ಈ ಕಾರಣಕ್ಕೆ ಮೋದಿ ಅವರ ರ‍್ಯಾಲಿಯನ್ನು ಬಿಜೆಪಿ ರದ್ದುಪಡಿಸಿದೆ. ಆದರೆ, ಇದಕ್ಕೆಲ್ಲಾ ರಸ್ತೆ ತಡೆಯೇ ಕಾರಣ ಎಂದು ನೆಪ ಹೇಳುತ್ತಿದೆ’ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಲೇವಡಿ ಮಾಡಿದ್ದಾರೆ.

‘ರಾಜ್ಯದಾದ್ಯಂತ ಮೋದಿ ಮತ್ತು ಬಿಜೆಪಿ ವಿರೋಧಿ ಅಲೆ ಇದೆ. ಇದೇ ಕಾರಣಕ್ಕೆ ರಾಜ್ಯದ ಜನರು ರ‍್ಯಾಲಿಯಲ್ಲಿ ಭಾಗಿಯಾಗಿಲ್ಲ. ಇದಕ್ಕಾಗಿ ಬಿಜೆಪಿ ಹರಿಯಾಣ ಮತ್ತು ರಾಜಸ್ಥಾನದಿಂದ ಜನರನ್ನು ಕರೆಸಲು ಯೋಜಿಸಿತ್ತು. ಆದರೆ, ಅಲ್ಲಿಂದಲೂ ಜನರು ಬರಲಿಲ್ಲ. ಹೀಗಾಗಿಯೇ ಬಿಜೆಪಿಯು ಮೋದಿ ಅವರ ರ‍್ಯಾಲಿಯನ್ನು ರದ್ದುಪಡಿಸಿದೆ’ ಎಂದು ಪಂಜಾಬ್‌ ಯುವ ಕಾಂಗ್ರೆಸ್‌ ಘಟಕವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು