ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾ: ಕೋರ್ಟ್‌ ಅದೇಶ ಉಲ್ಲಂಘನೆ ಆರೋಪ, ಟಿಎಂಸಿಯಿಂದ ‘ಸುಪ್ರೀಂ’ಗೆ ಅರ್ಜಿ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ಆರೋಪ
Last Updated 26 ನವೆಂಬರ್ 2021, 7:34 IST
ಅಕ್ಷರ ಗಾತ್ರ

ನವದೆಹಲಿ: ತ್ರಿಪುರಾದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ ಎಂದು ಆರೋಪಿಸಿರುವ ಟಿಎಂಸಿ, ಈ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದೆ.

ಈ ಸಂಬಂಧ ಟಿಎಂಸಿ ಸಲ್ಲಿಸಿರುವ ಎರಡು ಅರ್ಜಿಗಳನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಎ.ಎಸ್‌.ಬೋಪಣ್ಣ ಅವರಿರುವ ನ್ಯಾಯಪೀಠಕ್ಕೆ ಮನವಿ ಮಾಡಿದರು.

‘ಮುಕ್ತ ಹಾಗೂ ನ್ಯಾಯಯುತವಾಗಿ ಚುನಾವಣೆ ನಡೆಯಬೇಕು. ಈ ಸಂದರ್ಭದಲ್ಲಿ ವರದಿ ಮಾಡಲು ಮಾಧ್ಯಮಗಳಿಗೆ ಯಾವುದೇ ಅಡೆತಡೆಗಳು ಇರದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಆದರೆ, ಈ ಆದೇಶ ಕಾರ್ಯರೂಪಕ್ಕೆ ಬಂದಿರಲಿಲ್ಲ’ ಎಂದು ಸಿಬಲ್‌ ಅವರು ನ್ಯಾಯಪೀಠಕ್ಕೆ ತಿಳಿಸಿದರು.

‘ನ್ಯಾಯಾಲಯದ ಆದೇಶದಂತೆ, ಭದ್ರತಾ ಕಾರ್ಯಕ್ಕಾಗಿ ಸಿಎಪಿಎಫ್‌ ತುಕಡಿಗಳನ್ನು ನಿಯೋಜನೆ ಮಾಡಿರಲಿಲ್ಲ. ಅಭ್ಯರ್ಥಿಗಳ ಭದ್ರತೆಗಾಗಿ ಇಬ್ಬರು ಕಾನ್ಸ್‌ಸ್ಟೆಬಲ್‌ ಒದಗಿಸಿರಲಿಲ್ಲ. ಇವುಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಸಾಕ್ಷ್ಯಗಳು ನಮ್ಮ ಬಳಿ ಇವೆ. ಹೀಗಾಗಿ ತುರ್ತಾಗಿ ಈ ಅರ್ಜಿಗಳ ವಿಚಾರಣೆ ನಡೆಸಬೇಕು’ ಎಂದು ಕೋರಿದರು.

‘ಸಂವಿಧಾನ ದಿನಾಚರಣೆ ಸೇರಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ನ್ಯಾಯಮೂರ್ತಿಗಳು ಪಾಲ್ಗೊಂಡಿದ್ದಾರೆ. ಹೀಗಾಗಿ ಈ ಕುರಿತು ಏನು ಕ್ರಮ ಕೈಗೊಳ್ಳಬಹುದು ಎಂಬ ಯೋಚಿಸುತ್ತೇವೆ’ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT