ತ್ರಿಪುರಾ ಚುನಾವಣೆ: ಬಿಜೆಪಿ 55, ಐಪಿಎಫ್‌ಟಿ 5 ಕ್ಷೇತ್ರಗಳಲ್ಲಿ ಸ್ಪರ್ಧೆ

ಅಗರ್ತಲಾ: ಫೆ. 16ರಂದು ನಡೆಯಲಿರುವ ತ್ರಿಪುರಾ ವಿಧಾನಸಭಾ ಚುನಾವಣೆಗೆ ಹಳೆಯ ಮಿತ್ರಪಕ್ಷ ಐಪಿಎಫ್ ಟಿ ನೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ತ್ರಿಪುರಾ ಬಿಜೆಪಿ ಅಂತಿಮಗೊಳಿಸಿದೆ.
ಬಿಜೆಪಿ 55 ಕ್ಷೇತ್ರ ಮತ್ತು ಮಿತ್ರಪಕ್ಷ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಗೆದ್ದ ಪಟ್ಟಣ ಬರ್ದೋವಾಲಿಯಿಂದಲೇ ತಾವು ಸ್ಪರ್ಧಿಸುತ್ತಿರುವುದಾಗಿ ಮುಖ್ಯಮಂತ್ರಿ ಮಾಣಿಕ್ ಸಹಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತ್ರಿಪುರಾ ವಿಧಾನಸಭಾ ಚುನಾವಣೆಗೆ 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ಸೇರಿದಂತೆ 11 ಮಹಿಳೆಯರನ್ನು ಕಣಕ್ಕಿಳಿಸಿದೆ. ಉಳಿದ ಏಳು ಕ್ಷೇತ್ರಗಳಿಗೆ ನಂತರ ಘೋಷಿಸಲಾಗುವುದು ಎಂದು ಸಹಾ ಹೇಳಿದರು.
ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನಗಳು ಬಾಕಿ ಇರುವಾಗ ಪಟ್ಟಿ ಪ್ರಕಟಿಸಲಾಗಿದೆ.
ನಾಲ್ವರು ಶಾಸಕರಾದ ಮಿಮಿ ಮಜುಂದಾರ್, ಬಿಪ್ಲಬ್ ಘೋಷ್, ಅರುಣ್ ಚಂದ್ರ ಭೌಮಿಕ್ ಮತ್ತು ಪರಿಮಲ್ ದೆಬ್ಬರ್ಮಾ ಅವರನ್ನು ಕೈಬಿಟ್ಟ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಾಣಿಕ್ ಸಹಾ, ‘ಪ್ರತಿ ಬಾರಿಯೂ ನಡೆಯುತ್ತದೆ ಮತ್ತು ಇದು ದೊಡ್ಡ ವಿಷಯವಲ್ಲ’ ಎಂದರು.
ರಾಜ್ಯ ಘಟಕದ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ ಮಾತನಾಡಿ, 'ಸಚಿವರು, ಶಾಸಕರು ಮತ್ತು ನಾಯಕರ ಕಾರ್ಯಕ್ಷಮತೆ ವಿಶ್ಲೇಷಿಸಿದ ನಂತರ ಪಕ್ಷದ ಸಂಸದೀಯ ಮಂಡಳಿ ಟಿಕೆಟ್ ನೀಡಿದೆ. ಈ ಪ್ರಕ್ರಿಯೆಯಲ್ಲಿ ಪಕ್ಷದ ರಾಜ್ಯ ನಾಯಕತ್ವದ ಕೈವಾಡವಿಲ್ಲ’ ಎಂದರು.
ನಾಮಪತ್ರ ಸಲ್ಲಿಸಲು ಜ.30 ಕೊನೆ ದಿನ. ಫೆ. 16 ರಂದು ಮತದಾನ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.