ಶುಕ್ರವಾರ, ಡಿಸೆಂಬರ್ 3, 2021
25 °C

ತ್ರಿಪುರಾ: ಹಿಂಸಾಚಾರ ಆರೋಪಗಳ ನಡುವೆ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಗರ್ತಲಾ: ರಾಜಕೀಯ ಪ್ರೇರಿತ ಹಿಂಸಾಚಾರ ನಡೆಯುತ್ತಿದೆ ಎಂಬುದಾಗಿ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ ತ್ರಿಪುರಾದ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದ್ದು, ಗುರುವಾರ ಮತದಾನ ಆರಂಭವಾಗಿದೆ.

ಅಗರ್ತಲಾದ ವಾರ್ಡ್‌ ನಂ. 5ರಲ್ಲಿ ಪಕ್ಷದ ಒಬ್ಬ ಕಾರ್ಯಕರ್ತನಿಗೆ ಥಳಿಸಲಾಗಿದೆ ಎಂದು ಟಿಎಂಸಿ ಮುಖಂಡರು ಹೇಳಿಕೊಂಡಿದ್ದಾರೆ.

ರಾಜ್ಯದ ದಕ್ಷಿಣದಲ್ಲಿರುವ ಜಿಲ್ಲೆಯೊಂದರಲ್ಲಿ ಆಡಳಿತಾರೂಢ ಪಕ್ಷದ ಕಾರ್ಯಕರ್ತರು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿತೆನ್‌ ಚೌಧರಿ ಆರೋಪಿಸಿದ್ದಾರೆ. ಸಿಪಿಎಂ ಕಾರ್ಯಕರ್ತರು ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದೂ ಟೀಕಿಸಿದ್ದಾರೆ.

ಆದರೆ, ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ್ದನ್ನು ಪೊಲೀಸ್‌ ಇಲಾಖೆ ಖಚಿತಪಡಿಸಿಲ್ಲ.

ವಿರೋಧ ಪಕ್ಷಗಳ ಆರೋಪಗಳನ್ನು ಆಡಳಿತಾರೂಢ ಬಿಜೆಪಿ ಮುಖಂಡರು ತಳ್ಳಿಹಾಕಿದ್ದಾರೆ. ‘ಮತದಾರರು ಬಹಳ ಸಂಭ್ರಮದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ’ ಎಂದು ಪಕ್ಷದ ವಕ್ತಾರ ನವೇಂದು ಭಟ್ಟಾಚಾರ್ಯ ಹೇಳಿದ್ದಾರೆ.

ಈ ಚುನಾವಣೆ ಬಿಜೆಪಿ ಹಾಗೂ ಟಿಎಂಸಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಹಿಂಸಾಚಾರ ಹಿನ್ನೆಲೆಯಲ್ಲಿ ತ್ರಿಪುರಾದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುವಂತೆ ಕೋರಿ ಟಿಎಂಸಿ ನಾಯಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ಮುಂದೂಡುವುದು ತಪ್ಪು ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತ್ತು. ಶಾಂತಿಯುತ ಚುನಾವಣೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತ್ರಿಪುರಾ ಐಜಿ ಮತ್ತು ಡಿಜಿಪಿ ಅವರಿಗೆ ಪೀಠ ನಿರ್ದೇಶಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು