ಬುಧವಾರ, ಆಗಸ್ಟ್ 17, 2022
30 °C

'ರೈತರ ನೋವು ಸಹಿಸಲಾಗುತ್ತಿಲ್ಲ' ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಸಿಖ್ ಗುರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ್ದ ಸಿಖ್‌ ಧರ್ಮಗುರುವೊಬ್ಬರು ಬುಧವಾರ ಪ್ರತಿಭಟನಾ ಸ್ಥಳವಾದ ಸಿಂಘು ಗಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳದಲ್ಲಿ, ಮೃತರದ್ದು ಎನ್ನಲಾದ ಕೈಬರಹದ ಟಿಪ್ಪಣಿಯೊಣಿಯೊಂದು ಸಿಕ್ಕಿದೆ. ಅದರಲ್ಲಿ 'ರೈತರ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ,' ಎಂದು ಬರೆಯಲಾಗಿದೆ. ಈ ಪತ್ರವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

'ಕರ್ನಾಲ್ ಜಿಲ್ಲೆಯ ನಿಸ್ಸಿಂಗ್ ಪ್ರದೇಶದ ಸಿಂಗ್ರಾ ಗ್ರಾಮದವರಾದ ಸಂತ ರಾಮ್ ಸಿಂಗ್ (65) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಮಗೆ ಬುಧವಾರ ಫೋನ್‌ ಕರೆಯೊಂದು ಬಂದಿತ್ತು. ಅವರನ್ನು ಪಾಣಿಪತ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ,' ಎಂದು ಸೋನಿಪೇಟ್‌ ಠಾಣೆ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ, ಪ್ರತಿಭಟನಾ ಸ್ಥಳದ ಬಳಿ, ಸಂತ ರಾಮ್‌ ಸಿಂಗ್‌ ಅವರು ತಮ್ಮ ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಕರ್ನಾಲ್‌ಗೆ ತೆಗೆದುಕೊಂಡು ಹೋಗಲಾಯಿತು. ಅವರ ಅನುಯಾಯಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮರಣೋತ್ತರ ಪರೀಕ್ಷೆ ನಂತರ ಶರೀರವನ್ನು ಸಿಂಗ್ರಾ ಗ್ರಾಮದ ನಾನಕ್‌ಸರ್‌ ಗುರುದ್ವಾರಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿದು ಬಂದಿದೆ.

ಸಂತ ರಾಮ್‌ ಸಿಂಗ್‌ ಸಾವಿಗೆ ಶಿರೋಮಣಿ ಅಕಾಲಿ ದಳ, ಎಎಪಿ, ಕಾಂಗ್ರೆಸ್‌ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ರಾಮ್‌ ಸಿಂಗ್‌ ಅವರ ಬಲಿದಾನ ವ್ಯರ್ಥವಾಗದು,' ಎಂದು ಶಿರೋಮಣಿ ಅಕಾಲಿ ದಳದ ವರಿಷ್ಠ ಸುಖ್‌ಬೀರ್‌ ಸಿಂಗ್‌ ಬಾದಲ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಮೂರು ಕೃಷಿ ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ದೆಹಲಿ ಹೊರವಲಯದ ಸಿಂಘು ಗಡಿಯಲ್ಲಿ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದ ಸಾವಿರಾರು ರೈತರು ಎರಡು ವಾರಗಳಿಗೂ ಹೆಚ್ಚು ಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು