ಮಂಗಳವಾರ, ಜನವರಿ 18, 2022
22 °C

ಯುವಕರು ಎಷ್ಟು ದಿನ ತಾಳ್ಮೆಯಿಂದಿರಬೇಕು: ನಿರುದ್ಯೋಗದ ಬಗ್ಗೆ ವರುಣ್ ಗಾಂಧಿ ಹೇಳಿಕೆ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಮ್ಮ ಯುವಜನತೆಗೆ ಸರ್ಕಾರಿ ಉದ್ಯೋಗ ಸಿಗುತ್ತಿಲ್ಲ. ಒಂದು ವೇಳೆ ಕೆಲಸ ಸಿಗುವ ಅವಕಾಶವಿದ್ದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತದೆ. ಭಾರತದ ಯುವಕರು ಇನ್ನು ಎಷ್ಟು ದಿನ ತಾಳ್ಮೆಯಿಂದಿರಬೇಕು’ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ರೈತರ ಪ್ರತಿಭಟನೆ, ಲಖಿಂಪುರ ಖೇರಿ ಘಟನೆಗಳ ಬಗ್ಗೆ ತಮ್ಮದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ವರುಣ್‌ ಗಾಂಧಿ, ಈಗ ನಿರುದ್ಯೋಗ ಸಮಸ್ಯೆ ಬಗ್ಗೆಯೂ ಧ್ವನಿ ಎತ್ತಿದ್ದಾರೆ.  

‘ದೇಶದ ಯುವಕರಿಗೆ ಮೊದಲೇ ಸರ್ಕಾರಿ ಕೆಲಸ ಸಿಗುತ್ತಿಲ್ಲ. ಒಂದಷ್ಟು ಅವಕಾಶಗಳು ಬಂದರೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುತ್ತದೆ. ಪರೀಕ್ಷೆ ಬರೆದರೆ ವರ್ಷಗಟ್ಟಲೆ ಫಲಿತಾಂಶವೇ ಬರುವುದಿಲ್ಲ. ರೈಲ್ವೆ ಗ್ರೂಪ್ ‘ಡಿ’ ಪರೀಕ್ಷೆಗಾಗಿ 1.25 ಕೋಟಿ ಯುವಕರು ಎರಡು ವರ್ಷಗಳಿಂದ ಕಾಯುತ್ತಿದ್ದಾರೆ. ಅದೇ ರೀತಿ ಸೇನಾ ನೇಮಕಾತಿಯೂ ತಡವಾಗಿದೆ. ದೇಶದ ಯುವಕರು ಇನ್ನು ಎಷ್ಟು ದಿನ ತಾಳ್ಮೆಯಿಂದಿರಬೇಕು’ ಎಂದು ಬಿಜೆಪಿ ಯುವ ಸಂಸದ ಪ್ರಶ್ನಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (UPTET) ಅನ್ನು ರದ್ದುಪಡಿಸಲಾಗಿತ್ತು.

ಈ ವಿಚಾರವನ್ನು ಪ್ರಸ್ತಾಪಿಸಿ ಸೋಮವಾರ ಟ್ವೀಟ್‌ ಮಾಡಿದ್ದ ಅವರು, ‘ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ಯುವಕರ ಭವಿಷ್ಯದ ಜೊತೆ ಆಟವಾಡಿದಂತಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ರಾಜಕೀಯ ಪ್ರಭಾವಿ ವ್ಯಕ್ತಿಗಳ ಒಡೆತನದಲ್ಲಿವೆ. ಶಿಕ್ಷಣ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಯಾವಾಗ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ? ಎಂದು ಪ್ರಶ್ನಿಸಿದ್ದರು.

ಬಿಜೆಪಿ ಅಕ್ಟೋಬರ್‌ನಲ್ಲಿ ಬಿಡುಗಡೆಗೊಳಿಸಿದ್ದ ರಾಷ್ಟ್ರೀಯ ಕಾರ್ಯಕಾರಿಣಿಯ 80 ಸದಸ್ಯರ ಪಟ್ಟಿಯಿಂದ ಸಂಸದ ವರುಣ್‌ ಗಾಂಧಿ ಮತ್ತು ಮಾಜಿ ಸಚಿವೆ ಮೇನಕಾ ಗಾಂಧಿ, ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರನ್ನು ಹೊರಗಿಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು