ಬುಧವಾರ, ಆಗಸ್ಟ್ 10, 2022
23 °C
ಸರ್ಕಾರದ ಬೊಕ್ಕಸಕ್ಕೆ ₹ 14,775 ಕೋಟಿ ಹೆಚ್ಚುವರಿ ಹೊರೆ

ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿದ ಕೇಂದ್ರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡಿಎಪಿ ಮತ್ತು ಯೂರಿಯಾ ರಹಿತ ಇತರ ಕೆಲವು ರಸಗೊಬ್ಬರಗಳಿಗೆ ₹14,775 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಕೋವಿಡ್ ಸಾಂಕ್ರಾಮಿಕದ ಈ ಹೊತ್ತಿನಲ್ಲಿ ಕೇಂದ್ರದ ಈ ತೀರ್ಮಾನದಿಂದ ರೈತರಿಗೆ ರಸಗೊಬ್ಬರದ ಮೇಲಿನ ಹೊರೆ ಕಡಿಮೆಯಾಗಲಿದೆ.

ಯೂರಿಯಾವನ್ನು ಹೊರತುಪಡಿಸಿದರೆ, ದೇಶದಲ್ಲಿ ಡಿಎಪಿ ಗೊಬ್ಬರವನ್ನು ಅತಿಹೆಚ್ಚಾಗಿ ಬಳಸಲಾಗುತ್ತದೆ.

ಕಳೆದ ತಿಂಗಳು ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಯನ್ನು ಶೇ 140ರಷ್ಟು ಹೆಚ್ಚಿಸಲು ಕೇಂದ್ರ ನಿರ್ಧರಿಸಿತ್ತು.

ರೈತರ ಅನುಕೂಲಕ್ಕಾಗಿ ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಅನುಮೋದನೆ ನೀಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.

‘ರೈತರು ಪ್ರತೀ ಚೀಲಕ್ಕೆ ಹಳೆಯ ದರ ₹1,200ಕ್ಕೆ ಡಿಎಪಿ ಗೊಬ್ಬರ ಪಡೆಯಬಹುದು’ ಎಂದು ಅವರು ಹೇಳಿದರು. ಒಂದು ಚೀಲವು 50 ಕೆ.ಜಿ ತೂಕವಿರುತ್ತದೆ.

ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಡಿಎಪಿ ಗೊಬ್ಬರದ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹500ದಿಂದ ₹1,200ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹14,775 ಕೋಟಿ ಹೊರೆ ಬೀಳಲಿದೆ.

ರಸಗೊಬ್ಬರ ಸಹಾಯಧನಕ್ಕಾಗಿ 2021-22ರ ಬಜೆಟ್‌ನಲ್ಲಿ ಸರ್ಕಾರ ಸುಮಾರು ₹79,600 ಕೋಟಿ ಹಂಚಿಕೆ ಮಾಡಿದೆ.

ಕಳೆದ ವರ್ಷ ಡಿಎಪಿ ನೈಜ ಬೆಲೆ ಪ್ರತಿ ಚೀಲಕ್ಕೆ ₹1,700 ಇತ್ತು. ಇದರ ಮೇಲೆ ಕೇಂದ್ರ ಸರ್ಕಾರ ₹500 ಸಬ್ಸಿಡಿ ನೀಡುತ್ತಿದೆ. ಆದ್ದರಿಂದ ಕಂಪನಿಗಳು ಗೊಬ್ಬರವನ್ನು ರೈತರಿಗೆ ಚೀಲಕ್ಕೆ ₹1,200ರಂತೆ ಮಾರಾಟ ಮಾಡುತ್ತಿದ್ದವು.

ಜಾಗತಿಕ ಬೆಲೆಗಳ ಏರಿಕೆಯಿಂದ ಡಿಎಪಿ ನಿಜವಾದ ಬೆಲೆ ಪ್ರತಿ ಚೀಲಕ್ಕೆ ₹2,400ಕ್ಕೆ ಏರಿಕೆಯಾಗಿದೆ. ಆದರೆ ಹಳೆಯ ದರವಾದ ₹1,200ಕ್ಕೆ ಡಿಎಪಿ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಬ್ಸಿಡಿಯನ್ನು ಪ್ರತಿ ಚೀಲಕ್ಕೆ ₹1,200ಗೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.

ಸರ್ಕಾರವು ಯೂರಿಯಾದ ಪ್ರತಿ ಚೀಲಕ್ಕೆ ₹900 ಸಬ್ಸಿಡಿ ನೀಡುತ್ತಿದೆ. ಆದರೆ, ಡಿಎಪಿ ಸೇರಿದಂತೆ ಯೂರಿಯಾ ರಹಿತ ರಸಗೊಬ್ಬರಗಳಿಗೆ ಸರ್ಕಾರ ನಿಗದಿತ ಪ್ರಮಾಣದ ಸಹಾಯಧನವನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.

ಎನ್ ಗೊಬ್ಬರಕ್ಕೆ (ನೈಟ್ರೊಜನ್) ₹18.7, ಪಿ. ಗೊಬ್ಬರಕ್ಕೆ (ರಂಜಕ) ₹45.3, ಕೆ. ಗೊಬ್ಬರಕ್ಕೆ (ಪೊಟ್ಯಾಶ್) ₹10.1 ಮತ್ತು ಎಸ್ ಗೊಬ್ಬರಕ್ಕೆ (ಸಲ್ಫರ್) ₹2.3 ಸಹಾಯಧನ (ಪ್ರತಿ ಕೆ.ಜಿ.ಗೆ) ನೀಡಲಾಗುತ್ತದೆ. 

ದಾಸ್ತಾನಿರುವ ಡಿಎಪಿ ಗೊಬ್ಬರವನ್ನು ಹಳೆಯ ದರಕ್ಕೆ ಮಾರಾಟ ಮಾಡುವಂತೆ ರಸಗೊಬ್ಬರ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರ ಈಗಾಗಲೇ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು