ಲಿವ್-ಇನ್ ರಿಲೇಷನ್‌ನಿಂದ ಅಪರಾಧ ಹೆಚ್ಚಳ; ಹೆಣ್ಮಕ್ಕಳೇ ಜವಾಬ್ದಾರರು:ಕೇಂದ್ರ ಸಚಿವ

ನವದೆಹಲಿ: ಅಪರಾಧ ಪ್ರಕರಣ ಹೆಚ್ಚಳಕ್ಕೆ ಲಿವ್ ಇನ್ ರಿಲೇಷನ್ ಕಾರಣವಾಗಿದ್ದು, ವಿದ್ಯಾವಂತ ಹೆಣ್ಮಕ್ಕಳು ಇಂತಹ ಸಂಬಂಧಗಳಿಗೆ ಬೀಳಬಾರದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಭೀಕರ ಕೊಲೆ ಕೃತ್ಯ ಉದ್ದೇಶಿಸಿ ಸಚಿವರು ನೀಡಿದ ಹೇಳಿಕೆಯು ವಿವಾದಕ್ಕೀಡಾಗಿದೆ.
ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ ಕಿಶೋರ್, ಪೋಷಕರನ್ನು ಬಿಟ್ಟು ತೆರಳುವ ವಿದ್ಯಾವಂತ ಹೆಣ್ಮಕ್ಕಳು ಇದಕ್ಕೆ ಜವಾಬ್ದಾರರಾಗುತ್ತಾರೆ. ಹಾಗೇ ಮಾಡಬೇಕಾದರೆ ಅದಕ್ಕೆ ಸರಿಯಾದ ದಾಖಲಾತಿ ಇರಬೇಕು. ಪೋಷಕರು ವಿರೋಧ ವ್ಯಕ್ತಪಡಿಸಿದ್ದರೆ ಲಿವ್ ಇನ್ ಸಂಬಂಧಗಳಿಗೆ ಹೋಗುವ ಮುನ್ನ ನ್ಯಾಯಾಲಯದ ಸಮ್ಮತಿಯೊಂದಿಗೆ ಜೊತೆಯಾಗಿ ಬದುಕಬೇಕು ಎಂದು ಹೇಳಿದರು.
ಇದನ್ನೂ ಓದಿ: ಅಫ್ತಾಬ್ ಐದು ದಿನ ಪೊಲೀಸ್ ಕಸ್ಟಡಿಗೆ; ಮಂಪರು ಪರೀಕ್ಷೆಗೂ ಕೋರ್ಟ್ ಅಸ್ತು
ವಿದ್ಯಾವಂತ ಹೆಣ್ಮಕ್ಕಳು ಹಾಗೂ ಜೀವನದಲ್ಲಿ ಸ್ವಂತ ನಿಲುವನ್ನು ತೆಗೆದುಕೊಳ್ಳಲು ಸಮರ್ಥರಿರುವ ಹುಡುಗಿಯರೊಂದಿಗೆ ಹೀಗಾಗುತ್ತದೆ. ಅಂತಹ ಹುಡುಗಿಯರು ಎಚ್ಚರಿಕೆ ವಹಿಸಬೇಕು. ಲಿವ್ ಇನ್ ರಿಲೇಷನ್‌ಗೆ ಪೋಷಕರು ನಿರಾಕರಿಸಿದ್ದರಿಂದ ವಿದ್ಯಾವಂತ ಹುಡುಗಿಯರೇ ಜವಾಬ್ದಾರರಾಗುತ್ತಾರೆ. ಅಂತಹ ಸಂಬಂಧಗಳಿಗೆ ಬೀಳಬಾರದು ಎಂದು ಹೇಳಿದರು.
ಆದರೆ ಮಹಿಳೆಯರನ್ನು ಮಾತ್ರ ದೂಷಿಸಿದ ಕಿಶೋರ್ ಹೇಳಿಕೆಯನ್ನು ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಖಂಡಿಸಿದ್ದು, ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಸಚಿವರ ಹೇಳಿಕೆ ಹೃದಯಹೀನ ಹಾಗೂ ಕ್ರೂರವಾಗಿದೆ. ಹಾಗಾಗಿ ತಕ್ಷಣವೇ ಸಚಿವ ಸ್ಥಾನದಿಂದ ಕಿಶೋರ್ ಅವರನ್ನು ವಜಾಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.