ಶನಿವಾರ, ಏಪ್ರಿಲ್ 1, 2023
23 °C

ಸದನದಲ್ಲಿ ಅಸಭ್ಯ ವರ್ತನೆ: ಜನಪ್ರತಿನಿಧಿಗಳ ಅಶಿಸ್ತು ಅಕ್ಷಮ್ಯ ಎಂದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸದನದಲ್ಲಿ ಶಾಸಕರು ಹಾಗೂ ಸಂಸದರ ಅಶಿಸ್ತಿನ ವರ್ತನೆಯನ್ನು ಕ್ಷಮಿಸಲಾಗದು ಎಂದಿರುವ ಸುಪ್ರೀಂ ಕೋರ್ಟ್‌, ಸದನದಲ್ಲಿನ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಲ್ಲಿ ಅವರು ವಿಚಾರಣೆಯನ್ನೂ ಎದುರಿಸಬೇಕು ಎಂದು ಸೋಮವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಎಂ.ಆರ್. ಶಾ ಅವರನ್ನು ಒಳಗೊಂಡ ನ್ಯಾಯಪೀಠ, ‘ಶಾಸಕಾಂಗ ಸಂಸ್ಥೆಗಳಲ್ಲಿ ಶಿಷ್ಟಾಚಾರ ಪಾಲನೆ ಆಗಲೇಬೇಕು’ ಎಂದು ಕೇರಳ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ರಂಜಿತ್‌ ಕುಮಾರ್‌ ಅವರಿಗೆ ತಿಳಿಸಿತು.

ಕೇರಳ ವಿಧಾನಸಭೆಯಲ್ಲಿ 2015ರಲ್ಲಿ ನಡೆದ ಗದ್ದಲ ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ, ಈಗಿನ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಸೇರಿದಂತೆ ಸಿಪಿಎಂ ಮುಖಂಡರ ವಿರುದ್ಧದ ಪ್ರಕರಣ ಕೈಬಿಡುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ಆರೋಪ ಎದುರಿಸುತ್ತಿರುವ ಸದಸ್ಯರು ಆಗ ವಿರೋಧ ಪಕ್ಷದಲ್ಲಿದ್ದರು.

‘ಮಸೂದೆಯೊಂದರ ಮೇಲೆ ಚರ್ಚೆ ನಡೆಯುತ್ತಿರುವಾಗ, ಶಾಸಕರು ಎನ್ನಿಸಿಕೊಂಡವರು ಮೈಕ್‌ ಕಿತ್ತೆಸೆದು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಅವರ ಈ ವರ್ತನೆ ಅಕ್ಷಮ್ಯ’ ಎಂದು ನ್ಯಾಯಪೀಠ ಹೇಳಿದೆ.

‘ಸಾರ್ವಜನಿಕರ ಎದುರು ಯಾವ ವರ್ತನೆಯನ್ನು ನೀವು ಸಮರ್ಥಿಸಿಕೊಳ್ಳಲು ಹೊರಟಿದ್ದೀರಿ?  ತುಂಬಾ ಪ್ರಮುಖವಾದ ಬಜೆಟ್‌ ಮಂಡನೆ ಸಂದರ್ಭದಲ್ಲಿ ಗಲಾಟೆ ನಡೆಸಿದ ಈ ನಡವಳಿಕೆಯ ಹಿಂದೆ ಯಾವ ಸಾರ್ವಜನಿಕ ಹಿತಾಸಕ್ತಿ ಇದೆ?’  ಎಂದು ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ಪ್ರಕರಣವನ್ನು ವಾಪಸ್‌ ತೆಗೆದುಕೊಳ್ಳುವುದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಿರ್ಧಾರವೇ ಹೊರತು ರಾಜ್ಯ ಸರ್ಕಾರದ್ದಲ್ಲ ಎಂದು ಚಾಟಿ ಬೀಸಿದ ಪೀಠ, ಹೆಚ್ಚುವರಿ ದಾಖಲೆಗಳೊಂದಿಗೆ ಬರುವಂತೆ ಆದೇಶಿಸಿ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್‌, ‘ಜನಪ್ರತಿನಿಧಿಗಳ ನಡತೆ ಸದನದ ಘನತೆಗೆ ತಕ್ಕುದಾಗಿರಬೇಕು ಇಲ್ಲದಿದ್ದಲ್ಲಿ ಪರಿಣಾಮವನ್ನು ಎದುರಿಸಬೇಕು’ ಎಂದು ಮಾರ್ಚ್‌ 12ರಂದು ನೀಡಿದ ಆದೇಶದಲ್ಲಿ ಹೇಳಿತ್ತು.

ಈ ಘಟನೆಗೆ ಸಂಬಂಧಿಸಿದಂತೆ, ದೂರು ದಾಖಲಿಸಿದ ವಿಧಾನ ಸಮರ್ಪಕವಾಗಿಲ್ಲ. ಸಭಾಧ್ಯಕ್ಷರ ಅನುಮತಿ ಇಲ್ಲದೇ ಪ್ರಕರಣ ದಾಖಲಿಸಲಾಗಿದೆ ಎಂಬುದು ರಾಜ್ಯ ಸರ್ಕಾರದ ವಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು