ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಪಬ್‌ಜಿ ಆಡದಂತೆ ತಡೆದಿದ್ದಕ್ಕೆ ತಾಯಿಯನ್ನೇ ಗುಂಡಿಕ್ಕಿ ಕೊಂದ ಬಾಲಕ

ಅಕ್ಷರ ಗಾತ್ರ

ಲಖನೌ: ಆನ್‌ಲೈನ್‌ ಗೇಮ್ ‘ಪಬ್‌ಜಿ’ ಆಡುವುದನ್ನು ತಡೆದಿದ್ದಕ್ಕಾಗಿ 16 ವರ್ಷ ಪುತ್ರನೊಬ್ಬ ತಾಯಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಇಲ್ಲಿ ನಡೆದಿದೆ.

ಈ ಕೃತ್ಯ ಯಾರಿಗೂ ತಿಳಿಯಬಾರದು ಎಂಬ ಉದ್ದೇಶದಿಂದ ಮನೆಯ ಕೋಣೆಯೊಂದರಲ್ಲಿ ತಾಯಿಯ ಮೃತ ದೇಹವನ್ನು ಆತ ಮೂರು ದಿನಗಳ ಕಾಲ ಬಚ್ಚಿಟ್ಟಿದ್ದ ಎಂದು ಪೊಲೀಸರು ಬುಧ ವಾರ ತಿಳಿಸಿದ್ದಾರೆ.

ಭಾರತದಲ್ಲಿನ ಬಳಕೆದಾರರಿಗಾಗಿ‘ಪಬ್‌ಜಿ‘ ಗೇಮ್‌ನ ಹೆಸರನ್ನು ಬದಲಿಸಲಾಗಿದ್ದು, ‘ಬ್ಯಾಟಲ್ ಗ್ರೌಂಡ್ಸ್ ಮೊಬೈಲ್‌ ಇಂಡಿಯಾ’ ಹೆಸರಿನಲ್ಲಿ ಬಿಡು ಗಡೆ ಮಾಡಲಾಗಿದೆ.

ಘಟನೆ ವಿವರ: ಬಾಲಕನ ತಂದೆ ಸೈನ್ಯದಲ್ಲಿ ಅಧಿಕಾರಿಯಾಗಿದ್ದು, ಕೋಲ್ಕತ್ತದಲ್ಲಿ ಕರ್ತವ್ಯದಲ್ಲಿದ್ದಾರೆ. ಕುಟುಂಬ ಲಖನೌದಲ್ಲಿ ಇದೆ.

ಬಾಲಕ ‘ಪಬ್‌ಜಿ‘ ಗೇಮ್‌ನ ವ್ಯಸನಿ ಯಾಗಿದ್ದ. ಇದಕ್ಕೆ ಆಕ್ಷೇಪಿಸುತ್ತಿದ್ದ ತಾಯಿ, ‘ಪಬ್‌ಜಿ‘ ಆಡದಂತೆ ಆತನಿಗೆ ಬುದ್ಧಿವಾದ ಹೇಳುತ್ತಿದ್ದರು.

‘ಕಳೆದ ಶನಿವಾರ (ಜೂ.4) ರಾತ್ರಿ ಬಾಲಕನ ತಾಯಿ ತಮ್ಮ ಕೋಣೆಯಲ್ಲಿ ಮಲಗಿದ್ದರು. ಆಗ, ತಂದೆಯ ಪಿಸ್ತೂಲ್‌ ನಿಂದ ಬಾಲಕ ಗುಂಡಿಕ್ಕಿ ತಾಯಿಯನ್ನು ಹತ್ಯೆ ಮಾಡಿದ್ದಾನೆ. ತಾಯಿಯತ್ತ ಹಲವು ಸುತ್ತು ಗುಂಡು ಹಾರಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ತಾಯಿಯನ್ನು ಅಣ್ಣ ಹತ್ಯೆ ಮಾಡುವುದನ್ನು ತಂಗಿ ನೋಡಿದ್ದಾಳೆ. ಆದರೆ, ಈ ವಿಷಯವನ್ನು ಯಾರಿಗೂ ಹೇಳದಂತೆ ತಂಗಿಗೆ ತಾಕೀತು ಮಾಡಿದ್ದ ಬಾಲಕ, ಒಂದು ವೇಳೆ ಯಾರಿಗಾದರೂ ಹೇಳಿದರೆ ಆಕೆಯನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ’.

‘ತಾಯಿಯ ಮೃತದೇಹವನ್ನು ಕೋಣೆಯಲ್ಲಿ ಬಚ್ಚಿಟ್ಟಿದ್ದ ಬಾಲಕ, ಅದೇ ಕೋಣೆಯಲ್ಲಿ ತಂಗಿಯನ್ನು ಬಲವಂತದಿಂದ ಮಲಗಿಸುತ್ತಿದ್ದ. ತಂಗಿಯನ್ನು ಭಾನುವಾರ ಅದೇ ಕೋಣೆಯಲ್ಲಿ ಕೂಡಿ ಹಾಕಿ, ಬೀಗ ಹಾಕಿದ್ದ. ಗೆಳೆಯರನ್ನು ಭೇಟಿ ಮಾಡಲು ಹೋಗಿದ್ದ ಆತ ಆನ್‌ಲೈನ್‌ ಮೂಲಕವೇ ಊಟ ತರಿಸಿಕೊಂಡಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ಮೃತದೇಹ ಕೊಳೆತು, ದುರ್ವಾಸನೆ ಬರಲು ಆರಂಭಿಸಿದಾಗ ರೂಮ್‌ ಫ್ರೆಷ್ನರ್ ಸಿಂಪಡಿಸುತ್ತಿದ್ದ. ತಾಯಿಯ ಬಗ್ಗೆ ಸ್ನೇಹಿತರು ವಿಚಾರಿಸಿದಾಗ, ಅವರು ಅಜ್ಜಿಯ ಮನೆಗೆ ಹೋಗಿದ್ದಾರೆ ಎಂಬುದಾಗಿ ಹೇಳಿದ್ದ’.

‘ದುರ್ವಾಸನೆ ಸಹಿಸಲು ಕಷ್ಟವಾದ ನಂತರ ಬಾಲಕಿ ತನ್ನ ತಂದೆಗೆ ಕರೆ ಮಾಡಿ, ಅಣ್ಣನ ಕೃತ್ಯವನ್ನು ವಿವರಿಸಿದ್ದಾಳೆ. ವಿಷಯ ತಿಳಿದು ಆಘಾತಗೊಂಡ ಅವರು, ಸಂಬಂಧಿಕರನ್ನು ಸಂಪರ್ಕಿಸಿ ದ್ದಾರೆ. ನಂತರ ಸಂಬಂಧಿಕರು ಪೊಲೀಸ ರಿಗೆ ವಿಷಯ ತಿಳಿಸಿದ್ದಾರೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

‘ದುರಸ್ತಿ ಕಾರ್ಯಕ್ಕಾಗಿ ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್‌ವೊಬ್ಬರು ತಾಯಿಯನ್ನು ಹತ್ಯೆ ಮಾಡಿದ್ದಾಗಿ ಕಟ್ಟುಕತೆಯನ್ನು ಬಾಲಕ ಹೇಳಿದ್ದ. ನಂತರ, ತಾಯಿಯನ್ನು ತಾನೇ ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT