ಗುರುವಾರ , ಜೂನ್ 30, 2022
22 °C

UP polls | ಕಣದಲ್ಲಿ ಇಲ್ಲದಿದ್ದರೂ ಚುನಾವಣೆಯ ಕೇಂದ್ರ ಮುಖ್ತಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಉ (ಉತ್ತರ ಪ್ರದೇಶ) (ಪಿಟಿಐ): ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಆಡಳಿತದ ಅವಧಿಯಲ್ಲಿ ಮಾಫಿಯಾ ಡಾನ್‌ ಎಂದೇ ಹೆಸರಾಗಿದ್ದ ರಾಜಕಾರಣಿ ಮುಖ್ತಾರ್ ಅನ್ಸಾರಿ ಈ ಬಾರಿ ಚುನಾವಣಾ ಕಣದಲ್ಲಿ ಇಲ್ಲ. ಆದರೆ ಅವರು ಚುನಾವಣೆಯ ವಿಷಯವಾಗಿದ್ದಾರೆ. ಬಿಜೆಪಿ ನಾಯಕರು ತಮ್ಮ ಪ್ರತಿ ಪ್ರಚಾರ ಸಭೆಯಲ್ಲೂ ಅನ್ಸಾರಿಯ ಹೆಸರನ್ನು ಹೇಳುತ್ತಿದ್ದಾರೆ.

ಯೋಗಿ ಆದಿತ್ಯನಾಥ ಅವರ ಸರ್ಕಾರ ಬಂದ ನಂತರ ವಿವಿಧ ಪ್ರಕರಣಗಳಲ್ಲಿ ಅನ್ಸಾರಿಯನ್ನು ಜೈಲಿಗೆ ಕಳುಹಿಸಲಾಗಿದೆ. ಹೀಗಿದ್ದೂ ಅವರನ್ನು ಸಮಾಜವಾದಿ ಪಕ್ಷದ ಮಿತ್ರಪಕ್ಷ ರಾಜಬ್ಬರ್ ಸಮುದಾಯದ ಎಸ್‌ಬಿಎಸ್‌ಪಿಯ ಅಭ್ಯರ್ಥಿಯಾಗಿ ಅನ್ಸಾರಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು. ಆದರೆ, ನಾಮಪತ್ರ ಸಲ್ಲಿಸುವ ದಿನ ಅನ್ಸಾರಿ ಅವರ ಮಗ ಅಬ್ಬಾಸ್ ಅನ್ಸಾರಿ ನಾಮಪತ್ರ ಸಲ್ಲಿಸಿದ್ದರು.

ಮುಖ್ತಾರ್ ಅನ್ಸಾರಿಯನ್ನು ಅಭ್ಯರ್ಥಿ ಎಂದು ಘೋಷಿಸಿದ್ದಾಗ ಬಿಜೆಪಿ ಮತ್ತು ಬಿಎಸ್‌ಪಿ, ‘ಮುಖ್ತಾರ್ ಅನ್ಸಾರಿ ಗೆದ್ದರೆ, ರಾಜ್ಯದಲ್ಲಿ ಮತ್ತೆ ಮಾಫಿಯಾ ರಾಜ್ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಮಉ ಕ್ಷೇತ್ರವನ್ನು ಮತ್ತು ಆ ಮೂಲಕ ರಾಜ್ಯವನ್ನು ಮಾಫಿಯಾ ರಾಜ್‌ನಿಂದ ಸ್ವತಂತ್ರಗೊಳಿಸಿ’ ಎಂದು ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ಮುಖ್ತಾರ್ ಬದಲಿಗೆ ಅವರ ಮಗನನ್ನು ಕಣಕ್ಕೆ ಇಳಿಸಲಾಯಿತು. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಭಾಷಣಗಳಲ್ಲಿ ಈ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದಾರೆ.

ಬಿಜೆಪಿ ಮತ್ತು ಬಿಎಸ್‌ಪಿಯ ಈ ಪ್ರತಿಪಾದನೆಯ ವಿರುದ್ಧ ಅಬ್ಬಾಸ್ ಅನ್ಸಾರಿ ಸಹ ತಂತ್ರ ಹೂಡಿದ್ದಾರೆ. ‘ಬಿಜೆಪಿ ಒಂದು ಜಾತಿಯ ಭೂಗತ ಪಾತಕಿಗಳನ್ನು ರಕ್ಷಿಸುತ್ತಿದೆ. ಯೋಗಿ ಆದಿತ್ಯನಾಥ ಅವರ ಸರ್ಕಾರ ಬಂದ ನಂತರ ಉತ್ತರ ಪ್ರದೇಶದಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಧಿಕಾರಕ್ಕೆ ಬಂದರೆ ಜನರ ಸ್ವತ್ತುಗಳನ್ನು ಉರುಳಿಸುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಹಿರಂಗವಾಗಿ ಘೋಷಿಸುತ್ತಾರೆ. ಇದು ಸಂವಿಧಾನಬಾಹಿರ’ ಎಂದು ಅಬ್ಬಾಸ್ ಅನ್ಸಾರಿ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು