ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ 2022: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ‘ವಲಸೆ’ ಬಿಸಿ

ಒಬಿಸಿ ಪ್ರಭಾವಿ ನಾಯಕ, ಸಚಿವ ಮೌರ್ಯ, ಮೂವರು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
Last Updated 11 ಜನವರಿ 2022, 19:31 IST
ಅಕ್ಷರ ಗಾತ್ರ

ಲಖನೌ: ತಿಂಗಳಲ್ಲಿ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಆಘಾತ ಎದುರಾಗಿದೆ. ಹಿರಿಯ ಸಚಿವ ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪ್ರಭಾವಿ ನಾಯಕ ಸ್ವಾಮಿ ಪ್ರಸಾದ್‌ ಮೌರ್ಯ ಅವರು ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಮಂಗಳವಾರ (ಎಸ್‌ಪಿ) ಸೇರಿದ್ದಾರೆ. ಶಾಸಕರಾದ ರೋಶನ್‌ ಲಾಲ್‌ ವರ್ಮಾ, ಭಗವತಿ ಸಾಗರ್‌ ಮತ್ತು ಬ್ರಿಜೇಶ್‌ ಪ್ರಜಾಪತಿ ಅವರೂ ಬಿಜೆಪಿ ಬಿಟ್ಟು ಎಸ್‌ಪಿ ಸೇರ್ಪಡೆ ಆಗಿದ್ದಾರೆ.

ಮೌರ್ಯ ಅವರ ನಿಕಟವರ್ತಿ ಮೂಲಗಳ ಪ್ರಕಾರ, ಬಿಜೆಪಿಯ ಇನ್ನೂ ಕೆಲವು ಶಾಸಕರು, ಒಬಿಸಿ ಸಮುದಾಯದ ಇಬ್ಬರು ಸಚಿವರು ಬಿಜೆಪಿಗೆ ರಾಜೀನಾಮೆ ನೀಡಿ, ಎಸ್‌ಪಿ ಸೇರಲಿದ್ದಾರೆ.

ರೈತರು, ಯುವ ಜನರು, ದಲಿತರು, ಹಿಂದುಳಿದ ವರ್ಗಗಳು, ಸಣ್ಣ ಮತ್ತು ಮಧ್ಯಮ ವರ್ತಕರ ಬಗ್ಗೆ ಸರ್ಕಾರವು ಹೊಂದಿರುವ ಅಸಡ್ಡೆಯನ್ನು ಖಂಡಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ರಾಜ್ಯಪಾಲರಿಗೆ ಕಳುಹಿಸಿರುವ ಪತ್ರದಲ್ಲಿ ಮೌರ್ಯ ಅವರು ಹೇಳಿದ್ದಾರೆ.

ಭಿನ್ನ ಸಿದ್ಧಾಂತ ಇದ್ದಾಗಲೂ ಸಚಿವ ಸ್ಥಾನದಲ್ಲಿ ಮುಂದುವರಿದಿದ್ದಾಗಿ ಅವರು ಹೇಳಿದ್ದಾರೆ. ಆದರೆ, ದಲಿತರು ಒಬಿಸಿ, ಯುವ ಜರನು ಮತ್ತು ಸಣ್ಣ ವರ್ತಕರ ಸಂಕಷ್ಟವನ್ನು ತಮಗೆ ನೋಡಲಾಗುತ್ತಿಲ್ಲ ಎಂದಿದ್ದಾರೆ. ಅವರು ಕಾರ್ಮಿಕ ಸಚಿವರಾಗಿದ್ದರು.

ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಮೌರ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಮೌರ್ಯ ಅವರು ಜನಪ್ರಿಯ ನಾಯಕ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಅವರು ಸದಾ ಹೋರಾಡಿದ್ದಾರೆ. ಸಾಮಾಜಿಕ ನ್ಯಾಯವು ಗೆಲ್ಲಲಿದೆ. 2022ನೇ ವರ್ಷವು ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಅಖಿಲೇಶ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಪೂರ್ವಾಂಚಲ ಪ್ರದೇಶದ ಒಬಿಸಿ ಸಮುದಾಯದಲ್ಲಿ ಮೌರ್ಯ ಅವರು ಪ್ರಭಾವಿ. ಹಲವು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಮಗಳು ಸಂಘಮಿತ್ರ ಮೌರ್ಯ ಅವರು ಬದಾಯೂಂ ಕ್ಷೇತ್ರದ ಬಿಜೆಪಿ ಸಂಸದೆ.

ಇನ್ನೇನು ಚುನಾವಣೆ ನಡೆಯಲಿದೆ ಎಂಬ ಸಂದರ್ಭದಲ್ಲಿ ಮೌರ್ಯ ಅವರು ಪಕ್ಷ ಬಿಟ್ಟಿದ್ದು ಬಿಜೆಪಿಗೆ ದೊಡ್ಡ ನಷ್ಟ. 2017ರ ಫಲಿತಾಂಶವನ್ನು ಪುನರಾವರ್ತಿಸಬೇಕು ಎಂದು ಬಿಜೆಪಿ ಬಯಸುತ್ತಿದೆ. ಪೂರ್ವಾಂಚಲದ 156 ಕ್ಷೇತ್ರಗಳ ಪೈಕಿ 115ರಲ್ಲಿ ಬಿಜೆಪಿ ಕಳೆದ ಬಾರಿ ಗೆದ್ದಿತ್ತು. ಆದರೆ, ಮೌರ್ಯ ಅವರಂತಹ ಪ್ರಭಾವಿ ನಾಯಕನ ಅನುಪಸ್ಥಿತಿಯಲ್ಲಿ ಕಳೆದ ಬಾರಿಯ ಫಲಿತಾಂಶ ಮರುಕಳಿಸುವಂತೆ ಮಾಡುವುದು ಸುಲಭವಲ್ಲ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯಶೈಲಿಯ ಬಗ್ಗೆ ಮೌರ್ಯ ಅವರು ಈ ಹಿಂದೆಯೂ ಹಲವು ಬಾರಿ ಅಸಮಾಧಾನ ವ್ಯಕ್ತಪ‍ಡಿಸಿದ್ದರು ಎಂದು ಮೂಲಗಳು ಹೇಳಿವೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಬಿಜೆಪಿಯ ಹಲವು ನಾಯಕರಿಗೆ ಮೌರ್ಯ ಅವರು ತಮ್ಮ ಅಸಮಾಧಾನವನ್ನು ತಿಳಿಸಿದ್ದರು. ದರೆ, ಅದನ್ನು ಪಕ್ಷದ ನಾಯಕರು ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

10ರಿಂದ 12 ಶಾಸಕರು ಎಸ್‌ಪಿಗೆ ಸೇರಲಿದ್ದಾರೆ ಎಂದು ಮೌರ್ಯ ಅವರು ಹೇಳಿದ್ದಾರೆ.

ಅಖಿಲೇಶ್‌ ಕಾರ್ಯತಂತ್ರಕ್ಕೆ ಗೆಲುವು

ಎಸ್‌ಪಿಯ ಬೆಂಬಲ ನೆಲೆಯನ್ನು ವಿಸ್ತರಿಸಲು ಅಖಿಲೇಶ್‌ ಅವರು ಯತ್ನಿಸುತ್ತಿದ್ದಾರೆ. ಯಾದವ ಮತ್ತು ಮುಸ್ಲಿಂ ಸಮುದಾಯದ ಬೆಂಬಲ ಮಾತ್ರ ಎಸ್‌ಪಿಗೆ ಇದೆ ಎಂಬ ಭಾವನೆ ಜನರಲ್ಲಿ ಇದೆ. ಅದನ್ನು ಬದಲಿಸುವುದು ಅಖಿಲೇಶ್‌ ಅವರ ಗುರಿ. ಅದಕ್ಕಾಗಿ ಅವರು ಯಾದವೇತರ ಇತರ ಹಿಂದುಳಿದ ವರ್ಗಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ. ಈ ಕಾರ್ಯತಂತ್ರದಲ್ಲಿ ಅವರಿಗೆ ಗಮನಾರ್ಹವಾದ ಗೆಲುವು ಸಿಕ್ಕಿದೆ.

ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿಯ ಅಧ್ಯಕ್ಷ ಓಂ ಪ್ರಕಾಶ್‌ ರಾಜ್‌ಭರ್‌ ಅವರು ಅಖಿಲೇಶ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಜ್‌ಭರ್‌ ಅವರು ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಪ್ರಭಾವಿಯಾಗಿದ್ದಾರೆ. ರಾಜ್‌ಭರ್‌ ಅವರು ಈ ಹಿಂದೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದರು.

‘ಇದು (ಮೌರ್ಯ ಅವರ ರಾಜೀನಾಮೆ) ಪಕ್ಷಕ್ಕೆ ದೊಡ್ಡ ಹಿನ್ನಡೆ. ಮೌರ್ಯ ಅವರು ಒಬಿಸಿಯ ಪ್ರಭಾವಿ ನಾಯಕ. ರಾಜ್ಯದ ಪೂರ್ವ ಭಾಗದ ಹಲವು ಕ್ಷೇತ್ರಗಳಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಅತೃಪ್ತಿ ಶಮನಕ್ಕೆ ಯತ್ನ

ಒಬಿಸಿ ಮುಖಂಡರಲ್ಲಿ ಹಲವರು ಪಕ್ಷ ತೊರೆದಿರುವುದು ಬಿಜೆಪಿಯ ಕಳವಳಕ್ಕೆ ಕಾರಣವಾಗಿದೆ. ಹಾಗಾಗಿ ‘ಅತೃಪ್ತ’ ಶಾಸಕರ ಮನವೊಲಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಅದಕ್ಕಾಗಿ ಹಿರಿಯ ಮುಖಂಡರನ್ನು ನಿಯೋಜಿಸಲಾಗಿದೆ. ಸ್ವಾಮಿ ಪ್ರಸಾದ್‌ ಮೌರ್ಯ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನವೂ ನಡೆದಿದೆ.

‘ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬೇಡಿ. ಎಲ್ಲ ವಿಚಾರಗಳ ಬಗ್ಗೆ ಕುಳಿತು ಮಾತನಾಡೋಣ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು ಸ್ವಾಮಿ ಪ್ರಸಾದ್‌ ಮೌರ್ಯ ರಾಜೀನಾಮೆಯ ಬಳಿಕ ಟ್ವೀಟ್‌ ಮಾಡಿದ್ದರು.

ಆದರೆ, ಸ್ವಾಮಿ ಪ್ರಸಾದ್ ಮೌರ್ಯ ಅವರು ತಿರುಗೇಟು ನೀಡಿದ್ದಾರೆ. ‘ಅವರು ಏಕೆ ಈ ಹಿಂದೆಯೇ ಮಾತನಾಡಲು ಬರಲಿಲ್ಲ. ಹಲವು ಬಾರಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇನೆ. ಆಗ ಅವರು ನಿರ್ಲಕ್ಷಿಸಿದ್ದರು’ ಎಂದು ಹೇಳಿದ್ದಾರೆ.

ಹಲವು ಶಾಸಕರ ರಾಜೀನಾಮೆಯು ಬಿಜೆಪಿಗೆ ಮಾತ್ರವಲ್ಲ, ವಿರೋಧ ಪಕ್ಷಗಳಿಗೂ ಅಚ್ಚರಿ ಉಂಟು ಮಾಡಿದೆ.

ಶಾಸಕರು ಮತ್ತು ಸಚಿವರ ಅತೃಪ್ತಿ ಹೋಗಲಾಡಿಸುವ ಹೊಣೆಯನ್ನು ಕೇಶವ ಪ್ರಸಾದ್ ಮೌರ್ಯ ಮತ್ತು ಪಕ್ಷದ ಮುಖಂಡ ಸುನಿಲ್‌ ಬನ್ಸಲ್‌ ಅವರಿಗೆ ಬಿಜೆಪಿ ವಹಿಸಿದೆ. ಯೋಗಿ ಅವರ ಆಡಳಿತ ಶೈಲಿಯ ಬಗ್ಗೆ ಕೆಲವು ಶಾಸಕರು ಮತ್ತು ಸಚಿವರು ಕೆಲವು ತಿಂಗಳ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಬದಲಾವಣೆಯ ಮಾತೂ ಕೇಳಿ ಬಂದಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT