ಬುಧವಾರ, ಮೇ 18, 2022
23 °C
ಕಾರು ಹತ್ತಿ ವಾಪಸಾದ ವಿಕ್ರಮ್ ಸೈನಿ

UP Elections: ಬಿಜೆಪಿ ಶಾಸಕನನ್ನು ಓಡಿಸಿದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಬೆನ್ನಟ್ಟಿದ್ದಾರೆ. ಪ್ರಚಾರ ನಡೆಸದೆ ಆ ಶಾಸಕ ವಾಪಸ್ಸಾಗಿದ್ದಾರೆ.

ಪ್ರಚಾರಕ್ಕಾಗಿ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಗುರುವಾರ ಮುನ್ವಾರ್‌ಪುರ್ ಗ್ರಾಮಕ್ಕೆ ತೆರಳಿದ್ದರು. ಸೈನಿ ಅವರು ಗ್ರಾಮ ಪ್ರವೇಶಿಸುವುದನ್ನು ಗ್ರಾಮಸ್ಥರು ತಡೆದಿದ್ದಾರೆ. ನಂತರ ಅವರ ವಿರುದ್ಧ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ವಾಪಸ್ ತೆರಳುವಂತೆ ಸೈನಿ ಅವರನ್ನು ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಪ್ರತಿರೋಧ ಎದುರಿಸಿದ ಶಾಸಕರು, ಬೇರೆ ಆಯ್ಕೆಯಿಲ್ಲದೇ ಕಾರು ಹತ್ತಿ ವಾಪಸ್ ಹೋಗಿದ್ದಾರೆ.

ಈ ಕುರಿತ ವಿಡಿಯೊವನ್ನು ಕಿಸಾನ್ ಏಕತಾ ಮಂಚ್ ಟ್ವೀಟ್ ಮಾಡಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಡುವಾಗ ಸೈನಿ ಅವರು ಆ ಹೋರಾಟವನ್ನು ಲೇವಡಿ ಮಾಡಿದ್ದರು. ಲಖಿಂಪುರ ಖೇರಿ ಪ್ರಕರಣದಲ್ಲಿ ರೈತರ ಪರವಾಗಿ ಅವರು ಒಂದು ಮಾತನ್ನೂ ಹೇಳಿಲ್ಲ. ಹೀಗಿದ್ದೂ ಅವರು ಮತ ಕೇಳಲು ರೈತರ ಮುಂದೆ ಬಂದಿದ್ದಾರೆ. ಅವರ ಸ್ಥಾನ ಯಾವುದು ಎಂಬುದನ್ನು ನಾವು ಅವರಿಗೆ ತೋರಿಸಿ ದ್ದೇವೆ’ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರ ಜತೆ ಮಾತನಾ ಡಿರುವ ಶಾಸಕ ಸೈನಿ, ಗ್ರಾಮಸ್ಥರ ಪೈಕಿ ಕೆಲವರು ಮದ್ಯದ ಅಮಲಿನಲ್ಲಿದ್ದರು. ಹೀಗಾಗಿ ಭೇಟಿಗೆ ಪ್ರತಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ವಾಪಸ್ ಬಂದಿರುವುದಾಗಿ ಹೇಳಿದ್ದಾರೆ.

‘ಹಳೆ ಪಿಂಚಣಿ ವ್ಯವಸ್ಥೆ ತರುತ್ತೇವೆ’

‘ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರುಜಾರಿ ಮಾಡುತ್ತೇವೆ’ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಹೇಳಿದ್ದಾರೆ.

ಪಕ್ಷದ ವರ್ಚ್ಯುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಂಚಣಿ ವಿಷಯವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದೇವೆ ಎಂದು ಹೇಳಿದರು.

‘ಪಿಂಚಣಿಯು ನೌಕರರ ಹಕ್ಕು. ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನದಲ್ಲಿದ್ದ ಈ ಹಕ್ಕನ್ನು ನೌಕರರಿಂದ ಕಸಿದುಕೊಳ್ಳಲಾಗಿತ್ತು. ಈ ಹಕ್ಕನ್ನು ನಾವು ಮತ್ತೆ ನೀಡುತ್ತೇವೆ. ಹಳೆಯ ಪಿಂಚಣಿ ವ್ಯವಸ್ಥೆ ಮರುಜಾರಿಯಾದರೆ, ಲಕ್ಷಾಂತರ ನೌಕರರಿಗೆ ಅದರ ಪ್ರಯೋಜನ ದೊರೆಯಲಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು