ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವತಿ ಚುನಾವಣಾ ಪ್ರಚಾರ ಆರಂಭಿಸಿಲ್ಲವೆಂದು ವಿಪಕ್ಷಗಳ ಲೇವಡಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇತರ ಪಕ್ಷಗಳಿಂದ ಬಿರುಸಿನ ತಯಾರಿ
Last Updated 1 ಜನವರಿ 2022, 17:39 IST
ಅಕ್ಷರ ಗಾತ್ರ

ಲಖನೌ: ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್‌ಪಿ, ಕಾಂಗ್ರೆಸ್ ಪಕ್ಷಗಳು ಈಗಾಗಲೇ ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಆದರೆ ಬಿಎಸ್‌ಪಿ ಇನ್ನೂ ಚುನಾವಣಾ ಕಣಕ್ಕೆ ಇಳಿಯದಿರುವುದನ್ನು ವಿರೋಧಿ ಪಾಳಯದವರು ಲೇವಡಿ ಮಾಡುತ್ತಿದ್ದರೆ, ಸ್ವತಃ ಪಕ್ಷದ ಕಾರ್ಯಕರ್ತರಲ್ಲಿ ಅಚ್ಚರಿ ಉಂಟು ಮಾಡಿದೆ.

ಬಿಜೆಪಿಯು ‘ಜನವಿಶ್ವಾಸ ಯಾತ್ರೆ’ ಹೆಸರಿನಲ್ಲಿ ರಾಜ್ಯದಾದ್ಯಂತ ಪ್ರಚಾರದಲ್ಲಿ ತೊಡಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರು ಹಲವು ಸಾರ್ವಜನಿಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ‘ವಿಜಯರಥ ಯಾತ್ರೆ’ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸಹ ಸಾರ್ವಜನಿಕ ಸಭೆ ಹಾಗೂ ಮಹಿಳಾ ಸಭೆಗಳನ್ನು ನಡೆಸುತ್ತಿದ್ದಾರೆ.

ಆದರೆ ಮಾಯಾವತಿ ಅವರು ಕಳೆದ ಮೂರು ತಿಂಗಳಿಂದ ಯಾವುದೇ ಸಾರ್ವಜನಿಕ ಸಭೆಗಳನ್ನು ನಡೆಸಿಲ್ಲ. ಅವರು ಅಕ್ಟೋಬರ್‌ನಲ್ಲಿ ಕೊನೆಯದಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಮಾಯಾವತಿ ಅವರು ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು, ಅವರು ಈಗಾಗಲೇ ಸೋಲೊಪ್ಪಿಕೊಂಡಿದ್ದಾರೆ ಎಂಬುದರ ಸೂಚನೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

‘ನಾವು ಇತರ ಪಕ್ಷಗಳಿಗಿಂತ ಹಿಂದಿದ್ದೇವೆ. ನಮ್ಮ ಮತದಾರರನ್ನು ಇತರ ಪಕ್ಷಗಳು ಮನವೊಲಿಸುತ್ತಿವೆ. ತಕ್ಷಣವೇ ನಾವು ಪ್ರಚಾರಕ್ಕೆ ಚಾಲನೆ ನೀಡಬೇಕಿದೆ’ ಎಂದು ಉತ್ತರ ಪ್ರದೇಶದ ಬಿಎಸ್‌ಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ಅನೇಕ ಹಿರಿಯ ಮುಖಂಡರು ಪಕ್ಷ ತೊರೆದಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಮಾಯಾವತಿ ಅವರಿಗೆ ಗೊತ್ತಾಗಿದೆ. ಹೀಗಾಗಿಯೇ ಅವರು ಪ್ರಚಾರಕ್ಕೆ ಚಾಲನೆ ನೀಡಿಲ್ಲ’ ಎಂದು ಎಸ್‌ಪಿ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ 19 ಶಾಸಕರು ಗೆದ್ದಿದ್ದರು. ಈ ಪೈಕಿ 15 ಶಾಸಕರು ಇತರ ಪಕ್ಷಗಳೊಂದಿಗೆ ಕೈಜೋಡಿಸಿದ್ದಾರೆ ಅಥವಾ ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದ ಪಕ್ಷದಿಂದ ಉಚ್ಚಾಟನೆಗೊಂಡಿ
ದ್ದಾರೆ. ಹಿರಿಯ ಮುಖಂಡರಾದ
ರಾಮ್ ಅಚಲ್ ರಾಜ್‌ಭರ್, ಲಾಲ್‌ಜಿ ವರ್ಮಾ ಅವರು 6 ಶಾಸಕರ ಜೊತೆ ಎಸ್‌ಪಿ ಸೇರ್ಪಡೆಯಾಗಿದ್ದರು. ಇನ್ನೂ ಆರು ಶಾಸಕರು ಬಿಜೆಪಿಗೆ ವಲಸೆ ಹೋಗಿದ್ದಾರೆ.

‘ಇತರ ಪಕ್ಷಗಳನ್ನು ಅನುಸರಿಸುವುದಿಲ್ಲ’

‘ನಾವು ಯಾವ ಪಕ್ಷವನ್ನೂ ಅನುಸರಿಸಲು ಬಯಸುವುದಿಲ್ಲ. ಚುನಾವಣೆ ಕುರಿತಂತೆ ನಮಗೆ ನಮ್ಮದೇ ಆದ ಕಾರ್ಯವಿಧಾನ ಇದೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ಮಾಯಾವತಿ ಅವರು ಚಳಿಯಿಂದ ಮನೆಯಲ್ಲೇ ಇದ್ದು, ಇನ್ನೂ ಹೊರಗೆ ಬಂದಿಲ್ಲ ಎಂದು ಅಮಿತ್ ಶಾ ಎರಡು ದಿನಗಳ ಹಿಂದೆ ಲೇವಡಿ ಮಾಡಿದ್ದಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಚುನಾವಣೆ ಸಮೀಪಿಸಿದ್ದರೂ ಮಾಯಾವತಿ ಇನ್ನೂ ಪ್ರಚಾರಕ್ಕೆ ಬಂದಿಲ್ಲ. ಅವರು ಹೆದರಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಶಾ ಅವರು ಮೊರಾದಾಬಾದ್‌ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಹೇಳಿದ್ದರು.

‘ನಾವು ಇತರ ಪಕ್ಷಗಳನ್ನು ಅನುಸರಿಸಿದರೆ, ಚುನಾವಣೆ ಸಮಯದಲ್ಲಿ ಹಣದ ಕೊರತೆ ಉಂಟಾಗಬಹುದು. ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ಕಾರ್ಯ ನಿರ್ವಹಣೆ ವಿಧಾನವೇ ಬೇರೆ ಇದೆ. ಪ್ರತಿಸ್ಪರ್ಧಿ ಪಕ್ಷಗಳು ನಮ್ಮನ್ನು ಅಪಹಾಸ್ಯ ಮಾಡಿದರೂ ಅಥವಾ ಪತ್ರಿಕೆಗಳು ಈ ಬಗ್ಗೆ ಬರೆದರೂ ಇದನ್ನು ಬದಲಾಯಿಸಲು ನಾವು ಬಯಸುವುದಿಲ್ಲ. ನಮ್ಮ ಬಗ್ಗೆ ಇತರ ಪಕ್ಷಗಳು ಕಾಳಜಿ ವಹಿಸುವುದು ಬೇಡ’ ಎಂದು ಅವರು ತಿರುಗೇಟು ನೀಡಿದ್ದಾರೆ.


ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್: ಅಖಿಲೇಶ್

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಬಳಕೆಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದ್ದಾರೆ. ನೀರಾವರಿ ಉದ್ದೇಶಕ್ಕೆ ಬಳಸುವ ವಿದ್ಯುತ್ ಅನ್ನೂ ಉಚಿತವಾಗಿ ನೀಡುವ ವಾಗ್ದಾನ ಮಾಡಿದ್ದಾರೆ.

ಜನರಿಗೆ ಹೊಸ ವರ್ಷದ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಅವರು, 2022ನೇ ವರ್ಷವು ಹೊಸ ಉತ್ತರ ಪ್ರದೇಶಕ್ಕೆ ಹೊಸ ಬೆಳಕು ತರಲಿದೆ ಎಂದು ಉಲ್ಲೇಖಿಸಿದ್ದಾರೆ.

2021ರ ಸೆಪ್ಟೆಂಬರ್‌ನಲ್ಲಿ ಆಮ್ ಆದ್ಮಿ ಪಕ್ಷವು ಇದೇ ಭರವಸೆಯನ್ನು ನೀಡಿತ್ತು. 300 ಯೂನಿಟ್‌ವರೆಗೆ ಮನೆಗಳಿಗೆ ಉಚಿತ ವಿದ್ಯುತ್, 24 ಗಂಟೆಯೂ ವಿದ್ಯುತ್ ಹಾಗೂ 38 ಲಕ್ಷ ಕುಟುಂಬಗಳ ಬಾಕಿ ಬಿಲ್ ಮನ್ನಾ ಮಾಡುವುದಾಗಿ ಪ್ರಕಟಿಸಿತ್ತು.

ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್, ಉತ್ತರಾಖಂಡ, ಗೋವಾದಲ್ಲೂ ಎಎಪಿ ಇದೇ ರೀತಿಯ ಭರವಸೆ ನೀಡಿದೆ.

***
ಹಿಮಾಚಲ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಸೋತಿದ್ದರಿಂದ ಬಿಜೆಪಿಯು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಿತು. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಜನರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು

ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ


***

ಸಮಾಜವಾದಿ ಪಕ್ಷ ಬೆಂಬಲಿತ ಸಮಾಜವಿರೋಧಿ ಶಕ್ತಿಗಳು ಯೋಗಿ ಆದಿತ್ಯನಾಥ ಸರ್ಕಾರದ ಅವಧಿಯಲ್ಲಿ ಓಡಿಹೋಗಿದ್ದಾರೆ. ಭಯೋತ್ಪಾದನೆ ಹಾಗೂ ಗೂಂಡಾಗಿರಿಗಳು ಇವರ ಗುರುತಾಗಿದ್ದವು

ಧರ್ಮೇಂದ್ರ ಪ್ರಧಾನ್‌, ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ


***

ನಾನು ಉಳಿದ ಪಕ್ಷಗಳನ್ನು ಅನುಸರಿಸಿ, ಮೇಲಿಂದ ಮೇಲೆ ಸಾರ್ವಜನಿಕ ಸಭೆಗಳನ್ನು ನಡೆಸಿದರೆ, ಹಣಕಾಸಿನ ಮುಗ್ಗಟ್ಟು ಉಂಟಾಗಲಿದೆ
- ಮಾಯಾವತಿ, ಬಿಎಸ್‌ಪಿ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT