ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ ಸಮುದಾಯ ಸೆಳೆಯಲು ಸಮಾಜವಾದಿ ಪಕ್ಷ ಯತ್ನ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ: ಸರಣಿ ಸಭೆ ನಡೆಸಲು ಮುಂದಾಗಿರುವ ಪಕ್ಷ
Last Updated 26 ಜುಲೈ 2021, 10:34 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವು ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದೆ.

ಬ್ರಾಹ್ಮಣ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಬುದ್ಧಿಜೀವಿಗಳ ಸರಣಿ ಸಭೆಗಳನ್ನು ನಡೆಸಲು ಪಕ್ಷವು ಉದ್ದೇಶಿಸಿದೆ.

ಸಮಾಜವಾದಿ ಪಕ್ಷದ ‘ಪ್ರಬುದ್ಧ ಘಟಕ’ದ ನಾಯಕರು ಮತ್ತು ಪರಶುರಾಮ ಪೀಠದ ಪದಾಧಿಕಾರಿಗಳು ಪಕ್ಷದ ವರಿಷ್ಠರಾದ ಅಖಿಲೇಶ್‌ ಯಾದವ್‌ ಅವರನ್ನು ಭಾನುವಾರ ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ಮುಂದಿನ ತಿಂಗಳಿಂದ ಸರಣಿ ಸಭೆಗಳನ್ನು ನಡೆಸಲಾಗುವುದು. ಬಲ್ಲಿಯಾದಿಂದ ಸಭೆಗಳು ಆರಂಭವಾಗಲಿವೆ ಎಂದು ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಬ್ರಾಹ್ಮಣ ಮತ್ತು ಇತರ ಸಮುದಾಯದವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಬಿಜೆಪಿ ಸರ್ಕಾರದಲ್ಲಿ ದೌರ್ಜನ್ಯಗಳು ಹೆಚ್ಚಾಗಿವೆ. ಸಮಾಜವಾದಿ ಪಕ್ಷದ ಸರ್ಕಾರದಲ್ಲಿ ಮಾತ್ರ ನ್ಯಾಯ ದೊರೆಯಲಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಲಾಗುವುದು’ ಎಂದು ಚೌಧರಿ ತಿಳಿಸಿದ್ದಾರೆ.

ವಿಧಾನಸಭೆಯ ಮಾಜಿ ಸ್ಪೀಕರ್‌ ಮಾತಾ ಪ್ರಸಾದ್‌ ಪಾಂಡೆ, ಬುದ್ಧಿಜೀವಿಗಳ ಘಟಕದ ಅಧ್ಯಕ್ಷ ಮನೋಜ್‌ ಪಾಂಡೆ ಸೇರಿದಂತೆ ಬ್ರಾಹ್ಮಣ ಸಮುದಾಯದ ಹಿರಿಯ ನಾಯಕರ ನೇತೃತ್ವದಲ್ಲಿ ಸರಣಿ ಸಭೆಗಳನ್ನು ಆಯೋಜಿಸುವ ಕುರಿತು ಕಾರ್ಯತಂತ್ರ ರೂಪಿಸಲಿದ್ದಾರೆ.

ಮೇಲ್ಜಾತಿಯ ಜನರ ಜತೆ ಸಂಪರ್ಕ ಸಾಧಿಸಲು ರಾಜ್ಯದ ವಿವಿಧ ಭಾಗಗಳಿಗೆ ಪಕ್ಷದ ನಾಯಕರು ಪ್ರವಾಸ ಕೈಗೊಂಡು ಸಮ್ಮೇಳನಗಳನ್ನು ಆಯೋಜಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಈ ಹಿಂದೆ ಸಮಾಜವಾದಿ ಪಕ್ಷದ ಸರ್ಕಾರ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ವಿವರಿಸುವ ಪ್ರಯತ್ನ ಮಾಡಲಿದ್ದಾರೆ.

ಬಹುಜನ ಸಮಾಜ ಪಕ್ಷವು ಸಹ ಈಗಾಗಲೇ ಇದೇ ರೀತಿಯ ಪ್ರಯತ್ನದಲ್ಲಿ ಸಾಗಿದೆ. ಬ್ರಾಹ್ಮಣ ಸಮುದಾಯದ ನಾಯಕ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್‌ ಚಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ‘ಪ್ರಬುದ್ಧ ಸಮ್ಮೇಳನ’ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT