ಭಾನುವಾರ, ಸೆಪ್ಟೆಂಬರ್ 27, 2020
27 °C

ಇದು ಅತ್ಯಂತ ಭಾವನಾತ್ಮಕ, ಮಹತ್ವಪೂರ್ಣ ದಿನ: ಯೋಗಿ ಆದಿತ್ಯನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಅಯೋಧ್ಯೆ: 130 ಕೋಟಿ ಭಾರತೀಯರು ಮತ್ತು ಭಾರತದ ಬಗ್ಗೆ ಗೌರವವಿರುವ ಕೋಟ್ಯಂತರ ಜನರ ಭಾವನೆಗಳಿಗೆ ಗೌರವ ಕೊಟ್ಟ ದಿನ ಇದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಿದ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಬದ್ಧವಾಗಿ, ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭಾರತೀಯರಿಗೆ ಶಕ್ತಿಯಿದೆ. ದೇಶದ ವಿವಿಧೆಡೆಗಳಲ್ಲಿರುವ ಕೋಟ್ಯಂತರ ರಾಮಭಕ್ತರು ಈ ಕಾರ್ಯಕ್ರಮವನ್ನು ಶ್ರದ್ಧೆಯಿಂದ ನೋಡುತ್ತಿದ್ದಾರೆ. ಅವರೆಲ್ಲರಿಗೂ ನಮಿಸುತ್ತೇನೆ ಎಂದು ತಿಳಿಸಿದರು.

ರಾಮ ಮಂದಿರಕ್ಕಾಗಿ ಸಂತರು ಬಲಿದಾನ ಮಾಡಿದ್ದರು. ಮಂದಿರ ನಿರ್ಮಾಣದ ಆಶಯವನ್ನು ಜೀವಂತ ಇರಿಸಿಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿತ್ತು. ಹಿಂಸಾಚಾರಕ್ಕೆ ಅವಕಾಶವಿಲ್ಲದೆ ಈ ಆಶಯ ಶಾಂತಿಯುತವಾಗಿ ಈಡೇರಿದೆ. ಇದಕ್ಕಾಗಿ ಪ್ರಧಾನಿಯನ್ನು ಅಭಿನಂದಿಸುವೆ ಎಂದರು.

ಇದು ಅವಧಪುರಿ (ಅಯೋಧ್ಯೆ). ದೀಪಾವಳಿಯನ್ನು ಅಯೋಧ್ಯೆಯೊಂದಿಗೆ ಜೋಡಿಸಿ ದೀಪೋತ್ಸವ ಆಚರಿಸಿದ್ದೆವು. ನಮ್ಮ ಸಂಭ್ರಮ ಹೆಚ್ಚಿಸುವ ಕೆಲಸ ಇಂದು ಆಗಿದೆ. ರಾಮ ಮಂದಿರದ ಭೂಮಿಪೂಜೆ ಇಂದು ನಡೆದಿದೆ. ಇದು ಅತ್ಯಂತ ಭಾವನಾತ್ಮಕ, ಮಹತ್ವಪೂರ್ಣ ದಿನ. ಭಗವಾನ್ ರಾಮಮಂದಿರವು ದೇಶದ ಕೀರ್ತಿ ಕಳಶದ ರೂಪದಲ್ಲಿ ಇಲ್ಲಿ ಅರಳಿ ನಿಲ್ಲಲಿದೆ ಎಂದು ಹೇಳಿದರು.

ಅವಧಪುರಿಯನ್ನು ವಿಶ್ವದ ಸಂಪದ್ಭರಿತ ನಗರವಾಗಿಸುವ ಸಂಕಲ್ಪವನ್ನು ನಾವು ಮಾಡಿದ್ದೇವೆ. ರಾಮಾಯಣ ಪರ್ಯಟನೆ, ಸ್ವದೇಶ ದರ್ಶನದ ಯೋಜನೆಗಳಡಿ ಇಲ್ಲಿ ಸಾಕಷ್ಟು ಕೆಲಸಗಳು ಆಗಿವೆ ಎಂದ ಅವರು, ಜೈಜೈ ಶ್ರೀರಾಮ್ ಘೋಷಣೆಯೊಂದಿಗೆ ಭಾಷಣ ಮುಗಿಸಿದರು. 

ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಅಧ್ಯಕ್ಷ ಗೋಪಾಲದಾಸ್‌ಜಿ ಮಹಾರಾಜ್, ವಿವಿಧ ಪಂಥ ಮತ್ತು ಸಂಪ್ರದಾಯಗಳ ಸನ್ಯಾಸಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು