ಮಂಗಳವಾರ, ಮೇ 24, 2022
26 °C

UP Elections: ಹಸ್ತಿನಾಪುರ ‘ಹೋರಾಟ’ಕ್ಕೆ ಅರ್ಚನಾ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶದ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್‌ ಸಿಕ್ಕ ಬೆನ್ನಿಗೇ ರಾಜಕಾರಣವು ಎಷ್ಟೊಂದು ವಿಷಯುಕ್ತವಾಗಿದೆ ಎಂಬುದು ನಟಿ ಮತ್ತು ರೂಪದರ್ಶಿ ಅರ್ಚನಾ ಗೌತಮ್‌ ಅವರಿಗೆ ಅರಿವಾಗಿದೆ. ಆದರೆ, ‘ಧೃತಿಗೆಡದಿರಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳುತ್ತಾರೆ. ‘ಭಯಪಡಬೇಡಿ, ಗಟ್ಟಿಯಾಗಿ ನಿಲ್ಲಿ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಧೈರ್ಯ ತುಂಬಿದ್ದಾರೆ ಎಂದು ಅವರು ಹೇಳಿದ್ದಾರೆ. 

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಹಸ್ತಿನಾಪುರ  ಅತ್ಯಂತ ಸಾಂಪ್ರದಾಯಿಕವಾದ, ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವ ಕ್ಷೇತ್ರ. ಈ ಕ್ಷೇತ್ರದ ಅಭ್ಯರ್ಥಿಯಾಗಿರುವ ಅರ್ಚನಾಗೆ ಇದು ಚೊಚ್ಚಲ ಚುನಾವಣೆ. ಅವರು ಮಿಸ್‌ ಬಿಕಿನಿ ಇಂಡಿಯಾ ಸ್ಪರ್ಧೆ ಗೆದ್ದ ರೂಪದರ್ಶಿ. ಆಗಿನ ಅವರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಲಾಗಿದೆ.
ಅವರ ಬಗ್ಗೆ ಅತ್ಯಂತ ಅವಹೇಳನಕಾರಿಯಾದ ಮಾತುಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಡಲಾಗಿದೆ. ಬಿಜೆಪಿ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾದಂತ ಗುಂಪುಗಳು ಅರ್ಚನಾ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಯಾವುದರಿಂದಲೂ ವಿಚಲಿತರಾಗಿಲ್ಲ ಎಂದು ಅರ್ಚನಾ ಹೇಳಿದ್ದಾರೆ. 

‘ನಾನು ಹೆದರಿಲ್ಲ, ಮುಂದಕ್ಕೆ ಸಾಗಲು ಯಾವ ಹಿಂಜರಿಕೆಯೂ ಇಲ್ಲ’ ಎಂದು ಪಿಟಿಐಗೆ ನೀಡಿದ ಸಂದರ್ಶನ
ದಲ್ಲಿ ಅವರು ಹೇಳಿದ್ಧಾರೆ. 

ಅರ್ಚನಾ ಅವರು ಕಳೆದ ನವೆಂಬರ್‌ನಲ್ಲಿ ಕಾಂಗ್ರೆಸ್‌ ಸೇರಿದ್ದರು. ಅದಕ್ಕೂ ಮೊದಲು ಅಲ್ಪ ಕಾಲ ಸಿನಿಮಾ ರಂಗದಲ್ಲಿದ್ದರು. ‘ಗ್ರೇಟ್‌ ಗ್ರ್ಯಾಂಡ್‌ ಮಸ್ತಿ’, ‘ಹಸೀನಾ ಪಾರ್ಕರ್‌’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ, 2018ರಲ್ಲಿ ಮಿಸ್‌ ಬಿಕಿನಿ ಇಂಡಿಯಾ ಸ್ಪರ್ಧೆ ಸಂದರ್ಭದ ಅವರ ಫೋಟೊಗಳನ್ನು ರಾಜಕೀಯ ಪ್ರತಿಸ್ಪರ್ಧಿಗಳು ಬಳಸಿಕೊಳ್ಳುತ್ತಿದ್ದಾರೆ. 

‘ಅರ್ಚನಾ, ನೀನು ಇಲ್ಲಿ ಬರುವಾಗ ಅರೆ ಮನಸ್ಸಿನಿಂದ ಬರಬೇಡ. ನಿನ್ನ ಫೋಟೊಗಳು ಮತ್ತು ವಿಡಿಯೊಗಳನ್ನು ಹಿಡಿದುಕೊಂಡು ಜನರು ಟ್ರೋಲ್‌ ಮಾಡುತ್ತಾರೆ. ಅದಕ್ಕೆಲ್ಲ ಹೆದರುವ ಅಗತ್ಯ ಇಲ್ಲ. ಗಟ್ಟಿಯಾಗಿ ಇರು’ ಎಂದು ಪ್ರಿಯಾಂಕಾ ಅವರ ಜತೆಗೆ ಮಾತನಾಡಿದಾಗ ಹೇಳಿದರು ಎಂದು ಅರ್ಚನಾ ಹೇಳುತ್ತಾರೆ. 

ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ತಾನು ಪ್ರತಿನಿಧಿಸಿದ್ದು ಅದರ ಬಗ್ಗೆ ಜನರು ಹೆಮ್ಮೆಪಡಬೇಕು ಎಂಬುದು ಅವರ ಅಭಿಪ್ರಾಯ.

‘ನನಗೆ ಎರಡು ವೃತ್ತಿಪರ ಜೀವನಗಳಿವೆ. ಎರಡೂ ಭಿನ್ನ. ಅವುಗಳನ್ನು ಬೆರೆಸಬಾರದು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ದೇಶ ಹೆಮ್ಮೆ ಪಡುವಂತೆ ಮಾಡಿದ್ಧೇನೆ ಎಂಬುದನ್ನು ನನ್ನ ಬಗ್ಗೆ ಅಶ್ಲೀಲ ಹೇಳಿಕೆ ನೀಡುತ್ತಿರುವವರಿಗೆ ಹೇಳಲು ಬಯಸುತ್ತೇನೆ’ ಎಂಬುದು ಅರ್ಚನಾ ಅವರ ನೇರ ನುಡಿ. 

ಮಹಾಭಾರತದಲ್ಲಿ ಹಸ್ತಿನಾಪುರವು ಕೌರವರ ರಾಜಧಾನಿ. ಹಾಗಾಗಿ, ಹಸ್ತಿನಾಪುರದ ಮೇಲೆ ದ್ರೌಪದಿಯ ಶಾಪ ಇರುವುದರಿಂದ ಈ ಪ್ರದೇಶ ಅಭಿವೃದ್ಧಿ ಆಗುವುದಿಲ್ಲ ಎಂದು ಜನರು ಭಾವಿಸಿದ್ಧಾರೆ. ಈ ಶಾಪ ವಿಮೋಚನೆಗೆ ನಾವು ಬಹಳ ಕೆಲಸ ಮಾಡಬೇಕಿದೆ ಎಂಬುದು ನನಗೆ ತಿಳಿದಿದೆ ಎಂದು ಅರ್ಚನಾ ಹೇಳುತ್ತಾರೆ. 

‘ನಾನು ಇದೇ ನಗರದಲ್ಲಿ ಹುಟ್ಟಿ ಬೆಳೆದವಳು. ಹಾಗಾಗಿ, ಈ ನಗರದಲ್ಲಿ ಬದಲಾವಣೆ ತರಲು ಸಾಧ್ಯ ಎಂಬ ಆತ್ಮವಿಶ್ವಾಸ ನನ್ನಲ್ಲಿ ಇದೆ. ಚುನಾವಣೆಗಾಗಿ ನಾನು ಮುಂಬೈನಿಂದ ಬಂದವಳು ಅಲ್ಲ. ನನ್ನ ಮನೆ ಇಲ್ಲಿಯೇ ಇದೆ. ನಾನು ಇಲ್ಲಿಯೇ ಕಲಿತವಳು’ ಎಂದಿದ್ದಾರೆ ಅರ್ಚನಾ

‘ರಾಜಕೀಯವನ್ನು ಬಾಲ್ಯದಿಂದಲೇ ಗಮನಿಸಿದ್ದೇನೆ. ರಾಜಕೀಯದಲ್ಲಿ ಏನಾಗುತ್ತಿದೆ ಎಂಬುದರ ಅರಿವು ನನಗೆ ಸದಾ ಇತ್ತು. ನಾನು ಪತ್ರಿಕೆಗಳನ್ನು ಓದುತ್ತೇನೆ ಮತ್ತು ಸುದ್ದಿ ವಾಹಿನಿಗಳನ್ನು ನೋಡುತ್ತೇನೆ. ಜನರಿಗೆ ಅನ್ಯಾಯ ಆಗುತ್ತಿದೆ ಎಂದಾಗ ನನಗೆ ಭಾರಿ ಸಿಟ್ಟು ಬರುತ್ತದೆ’ ಎಂದು ಅರ್ಚನಾ ಅವರು ತಮ್ಮ ರಾಜಕೀಯ ಹಿನ್ನೆಲೆಯನ್ನು ವಿವರಿಸಿದ್ದಾರೆ. 

ಪ್ರಿಯಾಂಕಾ ಅವರ ‘ನಾನು ಹುಡುಗಿ, ಹೋರಾಡಬಲ್ಲೆ’ ಘೋಷಣೆಯೇ ರಾಜಕೀಯಕ್ಕೆ ಬರಲು ತಮಗೆ ಪ್ರೇರಣೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸ್ಫೂರ್ತಿ ಎಂದು ಅರ್ಚನಾ ಹೇಳಿದ್ದಾರೆ. 

***

ಜೀವನ ಇರಲಿ, ದೇಶ ಇರಲಿ, ಪ್ರತಿಯೊಬ್ಬರಿಗೂ ಬದಲಾವಣೆ ಬೇಕು. ಹಸ್ತಿನಾಪುರದ ಜನರೂ ಬದಲಾವಣೆ ಬಯಸಿದ್ದಾರೆ. ಅವರ ಮುಂದೆ ಒಂದು ತಾಜಾ ಮುಖ ಇದೆ

-ಅರ್ಚನಾ ಗೌತಮ್‌, ಹಸ್ತಿನಾಪುರದ ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು