ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Elections: ಹಳಬರು ನೇಪಥ್ಯಕ್ಕೆ, ಹೊಸಬರು ರಂಗಕ್ಕೆ

ಉತ್ತರ ಪ್ರದೇಶ: ಕಲ್ಯಾಣ್‌ ಸಿಂಗ್‌, ಅಜಿತ್‌ ಸಿಂಗ್‌, ಅಮರ್ ಸಿಂಗ್‌, ಲಾಲ್‌ಜಿ ಟಂಡನ್‌ ಸೇರಿ ಹಲವು ನಾಯಕರಿಲ್ಲದ ಚುನಾವಣೆ
Last Updated 17 ಜನವರಿ 2022, 19:55 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ರಾಜಕೀಯ ದಿಗಂತದಲ್ಲಿ ಪ್ರಜ್ವಲಿಸಿದ್ದ ಹಲವು ನಾಯಕರು ಈಗ ತೆರೆಮರೆಗೆ ಸರಿದಿದ್ದಾರೆ. ಇದು ನಂತರದ ತಲೆಮಾರಿನ ರಾಜಕಾರಣಕ್ಕೆ ವೇದಿಕೆ ಕಲ್ಪಿಸಿದೆ.

ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ರಾಷ್ಟ್ರೀಯ ಲೋಕ ದಳದ ಅಜಿತ್ ಸಿಂಗ್‌, ಬಿಜೆಪಿ ನಾಯಕ ಲಾಲ್‌ಜಿ ಟಂಡನ್‌, ಸಮಾಜವಾದಿ ಪಕ್ಷದ ಅಮರ್‌ ಸಿಂಗ್‌ ಮತ್ತು ವೇಣಿ ಪ್ರಸಾದ್‌ ವರ್ಮಾ ಎಲ್ಲರೂ ರಾಜ್ಯದ ರಾಜಕಾರಣದಲ್ಲಿ ಹಲವು ದಶಕಗಳ ಕಾಲ ವಿಜೃಂಬಿಸಿದ್ದವರು. ಫೆಬ್ರುವರಿ 10ರಿಂದ ಮಾರ್ಚ್‌ 7ರವರೆಗೆ ನಡೆಯಲಿರುವ ಚುನಾವಣೆಯಲ್ಲಿ ಇವರು ಯಾರೂ ಇಲ್ಲ. ಕಳೆದ ಎರಡು ವರ್ಷಗಳಲ್ಲಿ ಇವರೆಲ್ಲರೂ ನಿಧನರಾಗಿದ್ದಾರೆ.

ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್ ಅವರೂ ಚುನಾವಣಾ ರಾಜಕಾರಣದ ಕಲರವದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಬಹಿ ರಂಗವಾಗಿ ಕಾಣಿಸಿಕೊಳ್ಳುತ್ತಲೂ ಇಲ್ಲ.

ಬಿಜೆಪಿ ಮುಖಂಡ ಮತ್ತು ಹಿಂದುತ್ವದ ಪ್ರತಿಪಾದಕರಲ್ಲಿ ಪ್ರಮುಖರಾಗಿದ್ದ ಕಲ್ಯಾಣ್‌ ಸಿಂಗ್ ಅವರು ಯಾದವೇತರ ಇತರ ಹಿಂದುಳಿದ ವರ್ಗಗಳನ್ನು ತಮ್ಮ ಪಕ್ಷದ ಪರವಾಗಿ ಸಂಘಟಿಸಿದ್ದರು. ಅವರು 2021ರ ಆಗಸ್ಟ್‌ನಲ್ಲಿ ಮೃತರಾದರು. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕಲ್ಯಾಣ್ ಅವರ ಪ್ರಭಾವ ವ್ಯಾಪಕವಾಗಿತ್ತು.

ಅವರ ಮೊಮ್ಮಗ ಸಂದೀಪ್‌ ಸಿಂಗ್‌ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಅತ್ರೌಲಿ ಕ್ಷೇತ್ರದಲ್ಲಿ ಗೆದ್ದಿದ್ದರು. ಕಲ್ಯಾಣ್‌ ಅವರ ಮಗ ರಾಜವೀರ್‌ ಸಿಂಗ್‌ ಅವರು ಇಟಾ ಕ್ಷೇತ್ರದ ಲೋಕಸಭಾ ಸದಸ್ಯ.

1992ರಲ್ಲಿ ಬಾಬರಿ ಮಸೀದಿ ಧ್ವಂಸವು ಕಲ್ಯಾಣ್‌ ಅವರ ರಾಜಕೀಯ ಜೀವನದ ಅತಿ ದೊಡ್ಡ ತಿರುವು. ಮಸೀದಿ ಧ್ವಂಸದ ನೈತಿಕ ಹೊಣೆ ಹೊತ್ತು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸಾವು ಬಿಜೆಪಿಗೆ ಅತಿ ದೊಡ್ಡ ನಷ್ಟ.

‘ಕಲ್ಯಾಣ್‌ ಅವರು ನಮ್ಮ ಪಕ್ಷದ ಅತ್ಯಂತ ದೊಡ್ಡ ನಾಯಕ. ಅವರ ಅನುಪಸ್ಥಿತಿಯು ಬಿಜೆಪಿಯನ್ನು ಈ ಚುನಾವಣೆಯಲ್ಲಿ ಕಾಡಲಿದೆ. ಅವರ ಕುಟುಂಬದ ಜತೆಗೆ ಪಕ್ಷವು ಇದೆ. ಅವರ ಮೊಮ್ಮಗ ಸಂದೀಪ್‌ ಅವರಿಗೆ ಪಕ್ಷವು ಈಗಾಗಲೇ ಟಿಕೆಟ್‌ ಘೋಷಿಸಿದೆ’ ಎಂದು ಬಿಜೆಪಿಯ ವಕ್ತಾರರೊಬ್ಬರು ಹೇಳಿದ್ದಾರೆ.

ಜಯಂತ್ ಸಿಂಗ್‌ ಚೌಧರಿ ಅವರುಚುನಾವಣೆಯಲ್ಲಿಇದೇ ಮೊದಲ ಬಾರಿಗೆಆರ್‌ಎಲ್‌ಡಿಯನ್ನು ಮುನ್ನಡೆಸುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವ ಅಜಿತ್‌ ಸಿಂಗ್‌ ಅವರು 2020ರ ಮೇಯಲ್ಲಿ ನಿಧನರಾದ ಬಳಿಕ ಜಯಂತ್‌ ಅವರು ಪಕ್ಷದ ನಾಯಕತ್ವಕ್ಕೆ ಬಂದರು. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಸಿಂಗ್ ಸೋತಿದ್ದರು. ಹಾಗಿದ್ದರೂ ರಾಜ್ಯದ ಪಶ್ಚಿಮ ಭಾಗದಲ್ಲಿರುವ ಜಾಟ್‌ ಸಮುದಾಯದ ಮೇಲೆ ಅವರಿಗೆ ಇದ್ದ ಪ್ರಭಾವವು ಪ್ರತಿಸ್ಪರ್ಧಿಗಳ ಮೆಚ್ಚುಗೆಗೂ ಪಾತ್ರವಾಗಿತ್ತು.

‘ಉತ್ತರ ಪ್ರದೇಶದ ಪಶ್ಚಿಮ ಭಾಗದ ಜನರಿಗೆ ಅಜಿತ್‌ ಸಿಂಗ್‌ ಅವರ ಬಗ್ಗೆ ಭಾರಿ ಗೌರವ ಇತ್ತು. ಜಯಂತ್‌ ಅವರ ನಾಯಕತ್ವವನ್ನು ಸ್ಥಾಪಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಜನರು ಅಜಿತ್‌ ಅವರಿಗೆ ನಮನ ಅರ್ಪಿಸಲಿದ್ದಾರೆ. ಈ ಭಾಗದಲ್ಲಿ ಆರ್‌ಎಲ್‌ಡಿ ಪರವಾದ ಅಲೆಯೇ ಸೃಷ್ಟಿಯಾಗಿದೆ’ ಎಂದು ಆರ್‌ಎಲ್‌ಡಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್‌ ದುಬೆ ಅಭಿಪ್ರಾಯಪಟ್ಟಿದ್ದಾರೆ. ಆರ್‌ಎಲ್‌ಡಿ ಮತ್ತು ಎಸ್‌ಪಿ ನಡುವೆ ಮೈತ್ರಿ ಇದೆ.

ಬಿಹಾರದ ಮಾಜಿ ಗವರ್ನರ್‌ ಲಾಲ್‌ಜಿ ಟಂಡನ್‌ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಆಪ್ತರಾಗಿದ್ದರು. 2020ರ ಜುಲೈನಲ್ಲಿ ಅವರು ಮೃತಪಟ್ಟರು. ಅವರ ಮಗ ಅಶುತೋಷ್‌ ಟಂಡನ್‌ ಅವರು ಯೋಗಿ ಆದಿತ್ಯನಾಥ ಸಚಿವ ಸಂಪುಟದಲ್ಲಿ ಇದ್ದಾರೆ. ತಂದೆಯ ಅನುಪಸ್ಥಿತಿಯಲ್ಲಿ ಅವರು ಮೊದಲ ಬಾರಿ ಚುನಾವಣೆ ಎದುರಿಸಬೇಕಿದೆ.

ಮುಲಾಯಂ ಸಿಂಗ್ ಅವರ ಮಗ ಅಖಿಲೇಶ್‌ ಯಾದವ್‌ ಅವರ ಕೈಗೆ ಸಮಾಜವಾದಿ ಪಕ್ಷದ ಚುಕ್ಕಾಣಿ ಬಂದಿದೆ.ಆರೋಗ್ಯ ಸಮಸ್ಯೆಗಳಿಂದಾಗಿ ಮುಲಾಯಂ ಅವರು ಚುನಾವಣಾ ರಾಜಕೀಯದಲ್ಲಿ ಸಕ್ರಿಯರಾಗಿಲ್ಲ. ‘ಮುಲಾಯಂ ಅವರು ಪಕ್ಷದ ಕಚೇರಿಗೆ ಆಗಾಗ ಬಂದು ನಮಗೆ ಮಾರ್ಗದರ್ಶನ ಮಾಡುತ್ತಿದ್ಧಾರೆ. ಅವರ ತರಬೇತಿ ಮತ್ತು ಮಾರ್ಗದರ್ಶನದಿಂದಾಗಿ ಪಕ್ಷವು ಅಖಿಲೇಶ್‌ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಲಿದೆ’ ಎಂದು ಎಸ್‌ಪಿಯ ಎಂಎಲ್‌ಸಿ ರಾಜ್‌ಪಾಲ್‌ ಕಶ್ಯಪ್‌ ಹೇಳಿದ್ದಾರೆ.

ಅಮರ್‌ ಸಿಂಗ್‌ ಮತ್ತು ವೇಣಿ ಪ್ರಸಾದ್‌ ವರ್ಮಾ ಅವರ ಅನುಪಸ್ಥಿತಿಯೂ ಎಸ್‌ಪಿಯನ್ನು ಕಾಡಲಿದೆ. ಸಿಂಗ್‌ ಅವರು 2020ರ ಆಗಸ್ಟ್‌ನಲ್ಲಿ ಮತ್ತು ವರ್ಮಾ ಅವರು ಅದೇ ವರ್ಷ ಮಾರ್ಚ್‌ನಲ್ಲಿ ನಿಧನರಾದರು.

ವೇಣಿ ಪ್ರಸಾದ್‌ ವರ್ಮಾ ಅವರು 2009ರಲ್ಲಿ ಎಸ್‌ಪಿ ಬಿಟ್ಟರೂ 2016ರಲ್ಲಿ ಮರು ಸೇರ್ಪಡೆ ಆದರು. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು. ಅವರ ಮಗ ರಾಕೇಶ್‌ ವರ್ಮಾ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ಧಾರೆ. ಬಾರಾಬಂಕಿಯಿಂದ ಅವರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಇನ್ನೊಬ್ಬ ಪ್ರಭಾವಿ ನಾಯಕ ರಾಯಬರೇಲಿಯ ಅಖಿಲೇಶ್‌ ಸಿಂಗ್ ಅವರು 2019ರ ಆಗಸ್ಟ್‌ನಲ್ಲಿ ನಿಧನರಾದರು. ಅವರ ಮಗಳು ಅದಿತಿ ಸಿಂಗ್‌ ತಂದೆಯ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಅವರು ರಾಯಬರೇಲಿ ಸದರ್ ಕ್ಷೇತ್ರದ ಶಾಸಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT