ಗುರುವಾರ , ಜೂನ್ 30, 2022
25 °C

ಅಮಿತಾಭ್ ಠಾಕೂರ್ ಕಡ್ಡಾಯ ನಿವೃತ್ತಿ: ಮಾಹಿತಿ ನೀಡಲು ಉ. ಪ್ರದೇಶ ಸರ್ಕಾರ ನಿರಾಕರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಮಾಜಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರ ಕಡ್ಡಾಯ ನಿವೃತ್ತಿ ಕುರಿತ ಮಾಹಿತಿ ಹಂಚಿಕೊಳ್ಳಲು ಉತ್ತರ ಪ್ರದೇಶ ಸರ್ಕಾರ ನಿರಾಕರಿಸಿದೆ. ನಿವೃತ್ತಿಗೆ ಸಂಬಂಧಿಸಿದ ಮಾಹಿತಿ ‘ಗೋಪ್ಯ ದಾಖಲೆ’ ವ್ಯಾಪ್ತಿಗೆ ಬರುತ್ತದೆ ಎಂದು ಸರ್ಕಾರ ಹೇಳಿದೆ.

ಈ ನಿರಾಕರಣೆಯು ಅನುಚಿತ ಮತ್ತು ಅನುಮಾನಾಸ್ಪದ ಎಂದು ಠಾಕೂರ್ ಹೇಳಿದ್ದಾರೆ. ಆರಂಭದಲ್ಲಿ ಕಡ್ಡಾಯ ನಿವೃತ್ತಿ ಹೊಂದುವಂತೆ ಮಾಡಲಾಯಿತು. ಇದೀಗ ತಮ್ಮ ಜೀವನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿರಾಕರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ನಿರ್ಧಾರದಂತೆ ಠಾಕೂರ್ ಅವರಿಗೆ ಮಾರ್ಚ್ 23ರಂದು ಕಡ್ಡಾಯ ನಿವೃತ್ತಿ ಘೋಷಿಸಲಾಗಿತ್ತು.

ಈ ನಿರ್ಧಾರಕ್ಕೆ ಸಂಬಂಧಿಸಿದ ದಾಖಲೆಗಳ ಪ್ರತಿಗಾಗಿ ಠಾಕೂರ್ ಅವರು ಮೇ 26ರಂದು ಮನವಿ ಸಲ್ಲಿಸಿದ್ದರು.

ಓದಿ: ಅಕ್ರಮ ಆಸ್ತಿ: ಠಾಕೂರ್ ನಿವಾಸದಲ್ಲಿ ಶೋಧ

‘ತಮ್ಮ ಕಡ್ಡಾಯ ನಿವೃತ್ತಿಗೆ ಸಂಬಂಧಿಸಿದ ನೋಟ್‌ಶೀಟ್, ಪತ್ರವ್ಯವಹಾರ ಮತ್ತಿತರ ದಾಖಲೆಗಳ ಪ್ರತಿಯನ್ನು ಅಮಿತಾಭ್ ಕೋರಿದ್ದರು. ಈ ದಾಖಲೆಗಳು ಅತ್ಯಂತ ಗೋಪ್ಯವಾಗಿರುವುದರಿಂದ ಅವುಗಳನ್ನು ನೀಡಲಾಗದು’ ಎಂದು ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಕುಮಾರ್ ಪ್ರಶಾಂತ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಗೃಹ ಸಚಿವಾಲಯ ಕೂಡ ಮಾಹಿತಿ ಹಕ್ಕು ಕಾಯ್ದೆ ಅಡಿ ಈ ದಾಖಲೆಗಳನ್ನು ನೀಡಲು ನಿರಾಕರಿಸಿತ್ತು.

ಸಾರ್ವಜನಿಕ ಹಿತಾಸಕ್ತಿಗಾಗಿ ಠಾಕೂರ್ ಅವರಿಗೆ ಕಡ್ಡಾಯ ನಿವೃತ್ತಿ ನೀಡುತ್ತಿರುವುದಾಗಿ 2021ರ ಮಾರ್ಚ್‌ 23ರಂದು ಘೋಷಿಸಲಾಗಿತ್ತು. ಸೇವೆಯ ಉಳಿದ ಅವಧಿಯಲ್ಲಿ ಕಾರ್ಯನಿರ್ವಹಿಸಲು ಅವರು ‘ಫಿಟ್’ ಆಗಿಲ್ಲ ಎಂದೂ ಕೇಂದ್ರ ಗೃಹ ಸಚಿವಾಲಯ ಹೇಳಿತ್ತು.

ಉತ್ತರ ಪ್ರದೇಶ ಹೊರತುಪಡಿಸಿ ಬೇರೆ ಯಾವುದಾದರೂ ರಾಜ್ಯಕ್ಕೆ ತನ್ನ ಕೇಡರ್ ಬದಲಾಯಿಸಬೇಕು ಎಂದು ಕೋರಿ 2017ರಲ್ಲಿ ಠಾಕೂರ್ ಅವರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.

2015ರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ತಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಠಾಕೂರ್ ಆರೋಪಿಸಿದ್ದರು. ಆ ಬಳಿಕ 2015ರ ಜುಲೈ 13ರಿಂದ ಅವರನ್ನು ಸೇವೆಯಿಂದ ಅಮಾನತಿನಲ್ಲಿರಿಸಲಾಗಿತ್ತು. ಅವರ ವಿರುದ್ಧ ವಿಚಕ್ಷಣಾ ದಳದ ತನಿಖೆಯನ್ನೂ ನಡೆಸಲಾಗಿತ್ತು.

ಆದರೆ, ಅವರನ್ನು ಅಮಾನತುಗೊಳಿಸಿದ್ದ ನಿರ್ಧಾರಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ 2016ರ ಏಪ್ರಿಲ್‌ನಲ್ಲಿ ತಡೆ ನೀಡಿತ್ತು. 2015ರ ಅಕ್ಟೋಬರ್ 11ರಿಂದ ಪೂರ್ವಾನ್ವಯವಾಗುವಂತೆ ಪೂರ್ತಿ ವೇತನದೊಂದಿಗೆ ಅವರ ಮರುನೇಮಕಕ್ಕೆ ಆದೇಶಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು