ಶುಕ್ರವಾರ, ಆಗಸ್ಟ್ 6, 2021
22 °C

ಉತ್ತರಾಖಂಡ ಲೂಟಿಗೆ ಬಿಜೆಪಿ, ಕಾಂಗ್ರೆಸ್‌ನಿಂದ ವ್ಯವಸ್ಥಿತ ಯೋಜನೆ: ಕೇಜ್ರಿವಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್: ಉತ್ತರಾಖಂಡವನ್ನು ಲೂಟಿ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ವ್ಯವಸ್ಥಿತ ಯೋಜನೆಯನ್ನು ರೂಪಿಸಿಕೊಂಡಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ. ಆ ವೇಳೆಯಲ್ಲಿ ಮಾತನಾಡಿರುವ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಉತ್ತರಾಖಂಡದ ನಾಯಕರು ರಾಜ್ಯವನ್ನು ಎಲ್ಲ ರೀತಿಯಲ್ಲಿ ನಾಶಮಾಡಿದ್ದಾರೆ. ಎರಡೂ ಪಕ್ಷಗಳು(ಬಿಜೆಪಿ ಮತ್ತು ಕಾಂಗ್ರೆಸ್‌) ರಾಜ್ಯವನ್ನು ಲೂಟಿ ಮಾಡಲು ವ್ಯವಸ್ಥಿತ ಯೋಜನೆಯೊಂದನ್ನು ರೂಪಿಸಿಕೊಂಡಿವೆ. ಆಡಳಿತ ಪಕ್ಷಕ್ಕೆ ಮುಖ್ಯಮಂತ್ರಿಯೇ ಸಿಗಲಿಲ್ಲ. 70 ವರ್ಷಗಳಲ್ಲಿ ಮೊದಲ ಬಾರಿಗೆ ಒಂದು ಪಕ್ಷವು ತನ್ನದೇ ಮುಖ್ಯಮಂತ್ರಿಯನ್ನು ನಿಷ್ಪ್ರಯೋಜಕ ಎಂಬುದಾಗಿ ಹೇಳಿದೆ' ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ತೀರಥ್ ‌ಸಿಂಗ್‌ ರಾವತ್‌ ಅವರು ದಿಢೀರ್ ಆಗಿ ರಾಜೀನಾಮೆ ನೀಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿ ಕೇಜ್ರಿವಾಲ್‌ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿರುವ ಕೇಜ್ರಿವಾಲ್‌, 'ಪ್ರತಿಪಕ್ಷಕ್ಕೆ ನಾಯಕನೇ ಇಲ್ಲ. ನಾಯಕನನ್ನು ಆಯ್ಕೆ ಮಾಡಲು ಅವರು ಕಳೆದ ಒಂದು ತಿಂಗಳಿನಿಂದ ದೆಹಲಿಗೆ ಬರುತ್ತಿದ್ದಾರೆ. ಉತ್ತರಾಖಂಡ ನಿವಾಸಿಗಳ ಅಭಿವೃದ್ಧಿಯ ಬಗ್ಗೆ ಯಾರು ಯೋಚಿಸುತ್ತಾರೆ? ಇಂತಹ ಪಕ್ಷಗಳು ಉತ್ತರಾಖಂಡ ಜನರ ಬಗ್ಗೆ ಕಾಳಜಿ ವಹಿಸುತ್ತವೆಯೇ? ಅವರು(ಕಾಂಗ್ರೆಸ್‌ ಮತ್ತು ಬಿಜೆಪಿ) ಜನರನ್ನು ಲೆಕ್ಕಿಸುವುದಿಲ್ಲ. ಅವರು ಅಧಿಕಾರಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಆಪ್ ಪಕ್ಷ ಉತ್ತರಾಖಂಡ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಈಗಾಗಲೇ ಘೋಷಿಸಿದೆ. ದೆಹಲಿಯ ಚುನಾವಣೆಯಲ್ಲಿ ಯಶಸ್ವಿ ಮಂತ್ರವೆಂದೇ ಗುರುತಿಸುವ ‘ಉಚಿತ ವಿದ್ಯುತ್‌‘ ಯೋಜನೆಯನ್ನೇ, ಈ ಚುನಾವಣೆಯಲ್ಲೂ ಪ್ರಮುಖ ವಿಷಯವಾಗಿಸಲು ಪಕ್ಷ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು