ಸೋಮವಾರ, ಮೇ 23, 2022
24 °C

ನಿರುದ್ಯೋಗ: ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಂಸದ ವರುಣ್ ಗಾಂಧಿ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಪಿಲಿಭಿತ್: ದೇಶದಲ್ಲಿ ಸುಮಾರು 1.5 ಕೋಟಿಯಷ್ಟು ಹುದ್ದೆಗಳು ಭರ್ತಿಯಾಗಬೇಕಿದ್ದರೂ, ನಿರುದ್ಯೋಗಿ ಯುವಕರು ಖಾಲಿ ಹೊಟ್ಟೆಯಲ್ಲಿಯೇ ಅಲೆದಾಡಬೇಕಾದ ಸ್ಥಿತಿ ಇದೆ ಎಂದು ಬಿಜೆಪಿ ಸಂಸದ ವರುಣ್‌ ಗಾಂಧಿ ಭಾನುವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ತಾವು ಪ್ರತಿನಿಧಿಸುವ 'ಪಿಲಿಭಿತ್‌' ಕ್ಷೇತ್ರಕ್ಕೆ ಎರಡು ದಿನಗಳ ಭೇಟಿ ಸಲುವಾಗಿ ಆಗಮಿಸಿರುವ ಅವರು, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೋಟ್ಯಂತರ ನಿರುದ್ಯೋಗಿಗಳಿಗೆ ಮುಂದೆ ಏನಾಗಲಿದೆ ಎಂಬುದರ ಅರಿವೂ ಇಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿನ ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಸಂಸದರು ನೀಡಿರುವ ಹೇಳಿಕೆಗಳನ್ನು ಅವರ (ವರುಣ್‌ ಗಾಂಧಿ) ವಕ್ತಾರ ಎಂ.ಆರ್‌.ಮಲಿಕ್‌ ಪ್ರಕಟಿಸಿದ್ದಾರೆ.

'ನಮ್ಮ ಹೋರಾಟ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆಯ ವಿರುದ್ಧ. ಪ್ರತಿಯೊಬ್ಬರಿಗೂ ಸಮಾನ ಆರ್ಥಿಕ ಅವಕಾಶಗಳು ಲಭಿಸಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಎಲ್ಲರೊಂದಿಗೆ ಕೂಡಿ ಕೆಲಸ ಮಾಡಿದಾಗ ಮಾತ್ರವೇ ಅದು ಸಾಧ್ಯವಾಗುತ್ತದೆ' ಎಂದು ವರುಣ್‌ ಗಾಂಧಿ ತಿಳಿಸಿದ್ದಾರೆ.

'ಯಾರೊಬ್ಬರ ಬ್ಯಾಂಕ್‌ ಖಾತೆಗೂ ಹಣ ಬಂದಿಲ್ಲ. ಆಶ್ವಾಸನೆ ನೀಡಿದ್ದ ಹಾಗೆ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂಬ ಭರವಸೆಯೂ ಈಡೇರಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಣ್ಣಾ ಹಜಾರೆ ಅವರ ಹೋರಾಟ ಮತ್ತು ದೆಹಲಿ ಗಡಿಗಳಲ್ಲಿ ನಡೆದ ರೈತರ ಪ್ರತಿಭಟನೆ ಬಗ್ಗೆಯೂ ಉಲ್ಲೇಖಿಸಿರುವ ವರುಣ್‌, 'ಹೋರಾಟಗಾರರೊಂದಿಗೆ ಕುಳಿತು, ಅಣ್ಣಾ ಹಜಾರೆ ಅವರ ಹೋರಾಟವನ್ನು ಬೆಂಬಲಿಸಿದ ಮೊದಲ ಸಂಸದ ನಾನು. ರೈತರ ಪ್ರತಿಭಟನೆಗಳು ನಡೆದಾಗ, ಅಧಿಕಾರಿಗಳನ್ನು ಕರೆದು ರೈತರ ಬೇಡಿಕೆಗಳತ್ತ ಗಮನಹರಿಸುವಂತೆ ಸೂಚನೆ ನೀಡಿದ್ದೆ' ಎಂದು ಹೇಳಿಕೊಂಡಿದ್ದಾರೆ.

'ನಮ್ಮ ನಿಜವಾದ ಹೋರಾಟ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ. ರಾಜಕೀಯ ಪಕ್ಷಗಳು ಮತ್ತು ನಾಯಕರು ತಮ್ಮ ದ್ವೇಷವನ್ನು ತೊರೆದು ದೇಶದ ಭವಿಷ್ಯದ ಬಗ್ಗೆ ಆಲೋಚಿಸಬೇಕು. ದೇಶದ ಭವಿಷ್ಯವನ್ನು ಭಾಷಣಗಳಿಂದ ಕಟ್ಟಲು ಸಾಧ್ಯವಿಲ್ಲ. ಅಥವಾ ಚುನಾವಣೆಗಳಲ್ಲಿನ ಗೆಲವು ಮತ್ತು ಸೋಲಿನಿಂದಲೂ ಅಲ್ಲ. ನಿಜವಾದ ಸೇವೆಯಿಂದ ದೇಶದ ಭವಿಷ್ಯ ನಿರ್ಮಿಸಬಹುದು' ಎಂದು ಹೇಳಿದ್ದಾರೆ.

ಮುಂದುವರಿದು, 'ದೇಶದ ಭವಿಷ್ಯ ವಿಚಾರವಾಗಿ ಕಳವಳಗೊಂಡಿದ್ದೇನೆ. ಕನಸುಗಳು ದೊಡ್ಡವಿವೆ. ಆದರೆ, ಸಂಪನ್ಮೂಲಗಳು ಮಾತ್ರ ಸೀಮಿತವಾಗಿವೆ. ಯಾವಾಗ ಖಾಸಗೀಕರಣವಾಗುತ್ತದೋ, ಆಗ ಉದ್ಯೋಗಾವಕಾಶಗಳು ಸೀಮಿತಗೊಳ್ಳುತ್ತವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ' ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಖಮಾರಿಯಾ ಸೇತುವೆ ಬಳಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ವರುಣ್‌ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅವರ ಭಾಷಣ ಕೇಳಲು ಸಾವಿರಾರು ಕಾರ್ಯಕರ್ತರು ನೆರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು