ರಾಜ್ಯಸಭೆಯ 12 ಸದಸ್ಯರ ಅಮಾನತು ಹಿಂಪಡೆಯದ ನಾಯ್ಡು: ಪ್ರತಿಪಕ್ಷಗಳ ಸಭಾತ್ಯಾಗ

ನವದೆಹಲಿ: ಮುಂಗಾರು ಅಧಿವೇಶನದಲ್ಲಿ 'ದುರ್ವರ್ತನೆ, ಉದ್ಧಟತನ, ಅಶಿಸ್ತು ಮತ್ತು ಹಿಂಸಾತ್ಮಕ ವರ್ತನೆ' ತೋರಿದ ಆರೋಪದಲ್ಲಿ ರಾಜ್ಯಸಭೆಯ 12 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿರುವ ಕ್ರಮವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ತಿಳಿಸಿದರು. ಈ ಹಿನ್ನೆಲೆ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿವೆ.
12 ಸದಸ್ಯರ ಮೇಲಿನ ಕ್ರಮ ಸಂಸತ್ತಿಗೆ ವಿರುದ್ಧವಾಗಿದ್ದಾಗಿದೆ. ಅಮಾನತುಗೊಳಿಸುವ ಮೊದಲು ಸದಸ್ಯರ ಹೆಸರನ್ನು ಹೇಳಬೇಕು. ಅದಾದ ನಂತರವೇ ಅಮಾನತು ಸೂಚನೆ ಹೊರಡಿಸಬೇಕು ಎಂಬ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾದಕ್ಕೆ ವೆಂಕಯ್ಯನಾಯ್ಡು ಪ್ರತಿಕ್ರಿಯಿಸಿದರು.
ನನ್ನ ವಾದವನ್ನು ಮಂಡಿಸಲು ನನಗೆ ಅವಕಾಶವನ್ನು ನೀಡಲಿಲ್ಲ. ಇದು ಸಂಸತ್ತಿನ ನಡವಳಿಯ ಉಲ್ಲಂಘನೆಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
'ಅಮಾನತುಗೊಂಡಿರುವ ಸದಸ್ಯರು ತಮ್ಮ ವರ್ತನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಆ ದಿನ ನಡೆದ ಘಟನೆಯಲ್ಲಿ ಸಭಾಧ್ಯಕ್ಷರು ತೆಗೆದುಕೊಂಡ ಕ್ರಮವಲ್ಲ. ಅದು ಮೇಲ್ಮನೆ ತೆಗೆದುಕೊಂಡ ಕ್ರಮ. ಆಗಸ್ಟ್ 10ರ ದಾಖಲೆಗಳನ್ನು ಗಮನಿಸಿ. ನಾವು ಸದಸ್ಯರ ಹೆಸರುಗಳನ್ನು ಹೇಳಿದ್ದೇವೆ ಮತ್ತು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿದ್ದೇವೆ' ಎಂದು ವೆಂಕಯ್ಯ ನಾಯ್ಡು ತಿಳಿಸಿದರು.
ಕೃಷಿ ಕಾಯ್ದೆಗಳು ಹಿಂದಕ್ಕೆ: ಉಭಯ ಸದನಗಳಲ್ಲಿ ಚರ್ಚೆ ಇಲ್ಲದೆ ಮಸೂದೆಗೆ ಒಪ್ಪಿಗೆ
ಪ್ರತಿಪಕ್ಷಗಳ 16 ಮಂದಿ ಸದಸ್ಯರು ಮಂಗಳವಾರ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ, ಅಮಾನತುಗೊಂಡಿರುವ 12 ಸದಸ್ಯರ ಮೇಲಿನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿದ್ದರು.
ಅಮಾನತಾದವರಲ್ಲಿ ಕಾಂಗ್ರೆಸ್‌ನ ಆರು, ಶಿವಸೇನಾ ಮತ್ತು ಟಿಎಂಸಿಯ ತಲಾ ಇಬ್ಬರು, ಸಿಪಿಎಂ ಮತ್ತು ಸಿಪಿಐಯ ತಲಾ ಒಬ್ಬರು ಸಂಸದರು ಇದ್ದಾರೆ. 12 ಸಂಸದರಲ್ಲಿ ಐವರು ಮಹಿಳೆಯರಿದ್ದಾರೆ. ಕಾಂಗ್ರೆಸ್‌ನ ಸಯ್ಯದ್ ನಾಸಿರ್ ಹುಸೇನ್, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ, ಸಿಪಿಎಂನ ಎಳಮರಂ ಕರೀಂ ಅಮಾನತಾದವರಲ್ಲಿ ಸೇರಿದ್ದಾರೆ.
ಚಳಿಗಾಲದ ಅಧಿವೇಶನದ ಮೊದಲ ದಿನ ಕೃಷಿ ಕ್ಷೇತ್ರದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಗೆ ಸಂಸತ್ತು ಆತುರದಲ್ಲಿ ಧ್ವನಿಮತದ ಒಪ್ಪಿಗೆ ನೀಡಿದೆ. ಚರ್ಚೆ ನಡೆಸದೆ ಕೇವಲ 4 ನಿಮಿಷದಲ್ಲಿ ಹಿಂತೆಗೆದುಕೊಂಡ ಬಗ್ಗೆ ಪ್ರತಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.