ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಖ್ಯಾತ ಗುಜರಾತಿ ನಟ, ರಾಜಕಾರಣಿ ನರೇಶ್‌ ಕನೋಡಿಯಾ ನಿಧನ

Last Updated 27 ಅಕ್ಟೋಬರ್ 2020, 10:25 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತಿ ಖ್ಯಾತ ನಟ, ರಾಜಕಾರಣಿ ನರೇಶ್‌ ಕನೋಡಿಯಾ(77) ಅವರು ಕೋವಿಡ್‌ನಿಂದಾಗಿ ಮಂಗಳವಾರ ನಿಧನರಾದರು.

ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದದ್ದ ನರೇಶ್ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.

ಅ.20 ರಂದು ನರೇಶ್‌ ಅವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದಕ್ಕೂ ಮುನ್ನ ಅವರು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಕೋವಿಡ್‌ನಿಂದಾಗಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎರಡು ದಿನಗಳ ಹಿಂದಷ್ಟೇ ನರೇಶ್ ಅವರ ಹಿರಿಯ ಸಹೋದರ, ಗುಜರಾತಿ ಗಾಯಕ ಮಹೇಶ್‌ ಕನೋಡಿಯಾ ತಮ್ಮ ಗಾಂಧಿನಗರ ನಿವಾಸದಲ್ಲಿ ಮೃತಪಟ್ಟಿದ್ದರು.

ನರೇಶ್‌ ಕನೋಡಿಯ ಅವರು 100 ಕ್ಕೂ ಹೆಚ್ಚು ಗುಜರಾತಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 2002 ರಿಂದ 2007ರಲ್ಲಿ ಕರ್ಜಾನ್‌ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದರು.

‘ಹಿರಿಯ ನಟ ಮತ್ತು ಮಾಜಿ ಶಾಸಕ ನರೇಶ್ ಕನೋಡಿಯಾ ಅವರ ನಿಧನದಿಂದ ಬೇಸರವಾಗಿದೆ. ಮನರಂಜನೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸದಾ ಸ್ಮರಣೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

‘ಎರಡು ದಿನಗಳಲ್ಲಿ ಮಹೇಶಣ್ಣ ಮತ್ತು ನರೇಶಣ್ಣನನ್ನು ಕಳೆದುಕೊಂಡಿದ್ದೇವೆ. ಗುಜರಾತಿ ಹಾಡುಗಳನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಸಾಮಾಜಿಕ ಸೇವೆ ಮತ್ತು ಹಿಂದುಳಿದವರ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ‘ ಎಂದು ಪ್ರಧಾನಿ ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಗುಜರಾತ್‌ ಸೂಪರ್‌ ಸ್ಟಾರ್‌, ಬಿಜೆಪಿ ಮಾಜಿ ಶಾಸಕನ ನಿಧನದಿಂದ ನನಗೆ ಬಹಳ ಬೇಸರವಾಗಿದೆ. ಗುಜರಾತಿ ಸಿನಿಮಾಗಳಲ್ಲಿ ತಮ್ಮಅಭಿನಯದ ಮೂಲಕ ಅವರು ಗುಜರಾತಿಗಳ ಮನಸ್ಸು ಗೆದಿದ್ದಾರೆ. ಸಮಾಜ ಮತ್ತು ಕಲೆಗೆ ಅವರ ಕೊಡುಗೆ ಹೊಸ ಪೀಳಿಗೆಗೆ ಸ್ಪೂರ್ತಿ ನೀಡಲಿದೆ’ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT