ಶುಕ್ರವಾರ, ಫೆಬ್ರವರಿ 26, 2021
32 °C

ತಮಿಳುನಾಡಿನಲ್ಲಿ ಬೀಸುತ್ತಾ ಶಶಿಕಲಾ ರಾಜಕೀಯ ಬಿರುಗಾಳಿ? ಸೆಳೆಯುತ್ತಾ ಬಿಜೆಪಿ?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದಾರೆ. ಕೋವಿಡ್ ಸೋಂಕಿನಿಂದಾಗಿ ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ತಮಿಳುನಾಡಿಗೆ ಹಿಂದಿರುಗಲಿದ್ದಾರೆ. ಜೈಲಿನಿಂದ ವಾಪಸಾದ ಶಶಿಕಲಾ ಅವರಿಂದ ತಮಿಳುನಾಡು ರಾಜಕೀಯದ ಮೇಲಾಗುವ ಪರಿಣಾಮ ಏನು ಎಂಬುದು ಸದ್ಯದ ಕುತೂಹಲವಾಗಿದೆ.

ಬಾಗಿಲು ಮುಚ್ಚಿದ ಪಳನಿಸ್ವಾಮಿ: ಶಶಿಕಲಾ ತಮಿಳುನಾಡಿಗೆ ಮರಳುವ ಮೊದಲೇ, ಮುಖ್ಯಮಂತ್ರಿ ಇ ಪಳನಿಸ್ವಾಮಿ ಜಯಲಲಿತಾ ಅವರ ₹ 79 ಕೋಟಿ ವೆಚ್ಚದ ಸ್ಮಾರಕವನ್ನು ಉದ್ಘಾಟಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಂಪರೆ ಮತ್ತು ಆಡಳಿತಾರೂಢ ಎಐಎಡಿಎಂಕೆ ಸರ್ಕಾರದಲ್ಲಿ ನಿಮಗೆ ಸ್ಥಾನವಿಲ್ಲ ಎಂಬ ಸಂದೇಶ ರವಾನಿಸಿದಂತೆ ಕಾಣುತ್ತಿದೆ.

ಶಶಿಕಲಾ ಜೈಲಿಗೆ ಹೋಗುವ ಸಂದರ್ಭದಲ್ಲಿ ಚೆನ್ನೈನ ಮರೀನಾ ಬೀಚ್‌ನ ಜಯಲಲಿತಾ ಸಮಾಧಿ ಮೇಲೆ ಮೂರು ಬಾರಿ ತಟ್ಟಿ ಪ್ರತಿಜ್ಞೆ ಮಾಡಿ ತೆರಳಿದ್ದರು. ಈ ನಾಟಕೀಯ ಘಟನೆ ತಮಿಳುನಾಡಿನ ರಾಜಕೀಯಕ್ಕೆ ಶಶಿಕಲಾ ಹಿಂದಿರುಗುವ ಸೂಚನೆ ನೀಡಿತ್ತು. ಹಠವಾದಿ ಜಯಲಲಿತಾ ಪರಂಪರೆಯನ್ನು ಮರುಸ್ಥಾಪಿಸುವ ಛಲವನ್ನು ಮನದಲ್ಲಿಟ್ಟುಕೊಂಡು ಶಶಿಕಲಾ ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು.

ಜೈಲಿಗೆ ತೆರಳುವ ಮುನ್ನ ತಮ್ಮನ್ನು ಮುಖ್ಯಮಂತ್ರಿ ಗದ್ದುಗೆ ಮೇಲೆ ಕೂರಿಸಿದ್ದಕ್ಕೆ ಶಶಿಕಲಾ ಅವರ ಕಾಲಿಗೆ ಎರಗಿ ಕೃತಜ್ಞತೆ ಸಲ್ಲಿಸಿದ್ದ ಮುಖ್ಯಮಂತ್ರಿ ಇ ಪಳನಿಸ್ವಾಮಿ ಈಗ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ವಾಸ್ತವವಾಗಿ ಶಶಿಕಲಾ ಅವರಿಗೆ ಅಣ್ಣಾಡಿಎಂಕೆಯ ಎಲ್ಲ ಬಾಗಿಲನ್ನು ಮುಚ್ಚಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದಿಂದಲೂ ಅವರನ್ನು ಉಚ್ಚಾಟಿಸಲಾಗಿದೆ.

ಬದಲಾಗಿದೆ ಪರಿಸ್ಥಿತಿ: ಶಶಿಕಲಾ ಜೈಲಿಗೆ ಹೋದ ಬಳಿಕ ಅಣ್ಣಾಡಿಎಂಕೆ ನಾಯಕರ ನಡುವೆ ಪರಸ್ಪರ ಗಲಾಟೆ ನಡೆದು ಪಕ್ಷ ಇಬ್ಬಾಗವಾಗಿತ್ತು. ಕೋರ್ಟು ಕಚೇರಿ ಎಲ್ಲವೂ ನಡೆದು ಕೊನೆಗೆ ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಯನ್ನು ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆ ಉಳಿಸಿಕೊಂಡರೆ, ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ಹೊಸ ಪಕ್ಷ ಸ್ಥಾಪಿಸಿದ್ದಾರೆ.

ಪಳನಿ ಸ್ವಾಮಿ–ಪನೀರ್ ಗೆಳೆತನ: ಎಐಎಡಿಎಂಕೆ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದ ಓ ಪನೀರ್ ಸೆಲ್ವಂ ಈಗ ಪಳನಿಸ್ವಾಮಿ ಸರ್ಕಾರದ ಭಾಗವಾಗಿದ್ದಾರೆ.

ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್ ಸಹ ಎಐಎಡಿಎಂಕೆ ಹೊರಗಿದ್ದಾರೆ. ಜಯಲಲಿತಾ ಅವರ ನಿಧನದ ಬಳಿಕ ಖಾಲಿಯಾಗಿದ್ದ ಆರ್‌ಕೆ ನಗರ ವಿಧಾನಸಭಾ ಕ್ಷೇತ್ರವನ್ನು ಅವರು ಗೆದ್ದು ಈಗ ಎಎಂಎಂಕೆ ನೇತೃತ್ವ ವಹಿಸುತ್ತಿದ್ದಾರೆ, ಕಳೆದ ಚುನಾವಣೆಯಲ್ಲಿ ದಿನಕರನ್ ಪಕ್ಷ ಶೇ. 5 ರಷ್ಟು ಮತಗಳನ್ನು ಗಳಿಸಿತ್ತು. ಆದರೆ, ಎಐಎಡಿಎಂಕೆಯ ಎರಡು ಎಲೆಗಳ ಚಿಹ್ನೆ ಇಲ್ಲದೆ ಶಶಿಕಲಾ ಅವರು ರಾಜಕೀಯದಲ್ಲಿ ಮುಂದುವರಿಯುವುದು ಕಷ್ಟ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮುಂದಿನ ನಡೆ: ಹಾಗಾದರೆ, ಶಶಿಕಲಾ ಅವರ ಮುಂದಿನ ನಡೆ ಏನಿರಬಹುದು ಎಂದು ನೋಡುವುದಾದರೆ, ಶಾಸಕರು ಸೇರಿದಂತೆ ಎಐಎಡಿಎಂಕೆಯ ಒಂದು ನಾಯಕರ ಗುಂಪಿನ ಮೇಲೆ ಅವರಿಗೆ ಹಿಡಿತವಿತ್ತು. ಆ ಹಿಡಿತವನ್ನು ಪುನರ್ ಸ್ಥಾಪಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಎಐಎಡಿಎಂಕೆ ಒಳಗೆ, ಎಲ್ಲವೂ ಸರಿ ಇಲ್ಲ. ಸಿಎಂ ಪಳನಿಸ್ವಾಮಿ ವಿರುದ್ಧ ಪನೀರ್ ಸೆಲ್ವಂ ಆಗಾಗ್ಗೆ ಬಂಡಾಯದ ಸೂಚನೆ ನೀಡುತ್ತಿರುವ ಬಗ್ಗೆ ಮಾತುಗಳಿದ್ದರೂ ಸಹ ಪಳನಿಸ್ವಾಮಿ ಎಲ್ಲವನ್ನೂ ನಿಭಾಯಿಸಿಕೊಂಡು ಸಾಗುತ್ತಿದ್ದಾರೆ.

ಸಮುದಾಯದ ಲೆಕ್ಕಾಚಾರ: ತೇವರ್ ಜಾತಿಗೆ ಸೇರಿದ ಶಶಿಕಲಾ ಆ ಮೂಲಕ ಧೃವೀಕರಣಕ್ಕೆ ಪ್ರಯತ್ನಿಸಬಹುದು. ಆದರೆ, ಪನೀರ್ ಸೆಲ್ವಂ ಸಹ ಅದೇ ಸಮುದಾಯದವರಾಗಿದ್ದಾರೆ. ಹಾಗಾಗಿ, ಇದು ವರ್ಕೌಟ್ ಆಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಗೌಂಡರ್ ಸಮುದಾಯವು ಎಐಎಡಿಎಂಕೆಯಲ್ಲಿ ಮೇಲುಗೈ ಸಾಧಿಸಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಸೆಳೆಯುತ್ತಾ ಬಿಜೆಪಿ?: ಶಶಿಕಲಾ ರಾಜಕೀಯ ಮರು ಆರಂಭದ ಬಗ್ಗೆ ಕೇಳಿಬರುತ್ತಿರುವ ಮತ್ತೊಂದು ಹಾದಿ ಎಂದರೆ ಬಿಜೆಪಿ. ಹೌದು, ರಜನಿಕಾಂತ್ ಅವರ ಮೂಲಕ ತಮಿಳುನಾಡಿನಲ್ಲಿ ಕಮಲ ಅರಳಿಸಲು ಮುಂದಾಗಿದ್ದ ಬಿಜೆಪಿಗೆ ಹಿನ್ನಡೆಯಾಗಿದ್ದು, ಅವರ ಪ್ಲಾನ್ ಬಿ ಶಶಿಕಲಾ ಎಂದು ಹೇಳಲಾಗುತ್ತಿದೆ. ಬಿಜೆಪಿ ಸಹ ಮುಖ್ಯಮಂತ್ರಿ ಪಳನಿಸ್ವಾಮಿ ಜೊತೆಗೆ ಯಾವುದೇ ಗಮನಾರ್ಹ ಒಪ್ಪಂದಕ್ಕೆ ಇದುವರೆಗೆ ಬಂದಿಲ್ಲ.

ಇದೇ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಶಶಿಕಲಾ ಯಾವ ಅಸ್ತ್ರ ಹಿಡಿದು ಅಖಾಡಕ್ಕೆ ಇಳಿಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು