ಶುಕ್ರವಾರ, ಮೇ 27, 2022
22 °C

ಸಭಾತ್ಯಾಗಕ್ಕೆ ಪ್ರಧಾನಿಯೇ ಕಾರಣ: ಕಾಂಗ್ರೆಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕೃಷಿ ಕಾಯ್ದೆಗಳ ವಿಚಾರವಾಗಿ ನಮ್ಮ ಕಾಳಜಿಗೆ ಸಮಾಧಾನಕರವಾದ ಯಾವುದೇ ಪ್ರತಿಕ್ರಿಯೆ ನೀಡದಿರುವ ಪ್ರಧಾನಿಯು ಸಭಾತ್ಯಾಗ ನಡೆಸುವ ಅನಿವಾರ್ಯ ಸ್ಥಿತಿಗೆ ನಮ್ಮನ್ನು ತಳ್ಳಿದರು’ ಎಂದು ಕಾಂಗ್ರೆಸ್‌ ಮುಖಂಡ ಅಧಿರ್‌ರಂಜನ್‌ ಚೌಧರಿ ಹೇಳಿದರು.

ಸಂಸತ್ತಿನ ಹೊರಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ರೈತರ ಅಭಿವೃದ್ಧಿಗಾಗಿ ಪ್ರಮುಖ ಹೆಜ್ಜೆಗಳನ್ನಿಡುವ ವಿಚಾರವಾಗಿ ಪ್ರಧಾನಿ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. 206 ರೈತರು ಜೀವ ಕಳೆದುಕೊಂಡಿದ್ದರೂ ಪ್ರಧಾನಿ ಆ ವಿಚಾರವಾಗಿ ಏನನ್ನೂ ಹೇಳಲು ಸಿದ್ಧರಿಲ್ಲ. ಬದಲಿಗೆ ಕಾಯ್ದೆಗಳ ಲಾಭಗಳ ಬಗ್ಗೆ ಮಾತನಾಡಿದರು. ಎಲ್ಲರಿಗೂ ಲಾಭದಾಯಕವಾಗುವುದಿಲ್ಲ ಎಂದಾದರೆ ಅಂಥ ಕಾನೂನನ್ನು ತರುವ ಅಗತ್ಯವಾದರೂ ಏನು? 18 ತಿಂಗಳ ಕಾಲ ಕಾಯ್ದೆಗಳನ್ನು ಅಮಾನತಿನಲ್ಲಿಡಲು ಸರ್ಕಾರ ಸಿದ್ಧವಿರುವುದಾದರೆ, ಸಂಪೂರ್ಣವಾಗಿ ರದ್ದು ಯಾಕೆ ಮಾಡಬಾರದು ಎಂಬುದು ನಮ್ಮ ಪ್ರಶ್ನೆ’ ಎಂದರು.

ಲೋಕಸಭೆಯಲ್ಲಿ ಬುಧವಾರ ಪ್ರಧಾನಿ ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ನಡೆಸಿದ್ದರು.

ಲೋಕಸಭೆಯಲ್ಲಿ ಮೋದಿ ಹೇಳಿದ್ದು...

* 18ನೇ ಶತಮಾನದ ಮನಸ್ಥಿತಿಯನ್ನಿಟ್ಟುಕೊಂಡು 21ನೇ ಶತಮಾನದ ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ನಮ್ಮ ರೈತರು ಸ್ವಾವಲಂಬಿಗಳಾಗಬೇಕಾದರೆ ಅವರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವರಿಗೆ ಅವಕಾಶ ಕಲ್ಪಿಸಬೇಕು

* ಕೃಷಿ ಕ್ಷೇತ್ರಕ್ಕೆ ಯಾವ ಪ್ರಮಾಣದಲ್ಲಿ ಹೂಡಿಕೆ ಬರಬೇಕೋ ಅಷ್ಟು ಬರುತ್ತಿಲ್ಲ. ಈ ಕ್ಷೇತ್ರವನ್ನು ಬಲಪಡಿಸಲು ಕೃಷಿಯ ಆಧುನೀಕರಣ ಹಾಗೂ ಹೂಡಿಕೆ ಪ್ರಮಾಣ ಹೆಚ್ಚಿಸುವುದು ಅಗತ್ಯ

* ‘ಕಾಯ್ದೆಗಳನ್ನು ನಾವು ಕೇಳಿಯೇ ಇಲ್ಲ ನೀವೇಕೆ ಅದನ್ನು ಕೊಟ್ಟಿರಿ’ ಎಂಬ ವಿಚಿತ್ರ ಪ್ರಶ್ನೆ ಕೇಳಲಾಗುತ್ತಿದೆ. ವರದಕ್ಷಿಣೆ, ತ್ರಿವಳಿ ತಲಾಖ್‌ ವಿಚಾರದಲ್ಲೂ ಕಾನೂನು ರಚಿಸಲು ಯಾರೂ ಕೇಳಿರಲಿಲ್ಲ. ಸಮಾಜದ ಏಳಿಗೆಗೆ ಅವುಗಳ ಅಗತ್ಯವಿತ್ತು ಎಂಬ ಕಾರಣಕ್ಕೆ ಮಾಡಲಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು