ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಬಂ. ವಿಧಾನಸಭೆ ಚುನಾವಣೆ: ನಂದಿಗ್ರಾಮ ಚಳವಳಿ ಕೀರ್ತಿಗಾಗಿ ಮಮತಾ-ಸುವೇಂದು ಪೈಪೋಟಿ

Last Updated 18 ಮಾರ್ಚ್ 2021, 2:10 IST
ಅಕ್ಷರ ಗಾತ್ರ

ನಂದಿಗ್ರಾಮ: ನಂದಿಗ್ರಾಮದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ನಡೆಸುತ್ತಿದ್ದವರ ಮೇಲೆ 2007ರಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 14 ಮಂದಿ ಬಲಿಯಾಗಿ ಈಗ 14 ವರ್ಷಗಳಾಗಿವೆ. 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬರಲು ಈ ಚಳವಳಿಯೇ ಮುಖ್ಯ ಕಾರಣ. ಈಗ, ಈ ಚಳವಳಿಯ ಯಶಸ್ಸಿನ ಕೀರ್ತಿಗಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಮಮತಾ ಅವರ ಆಪ್ತರಾಗಿದ್ದ, ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಸ್ಥಳೀಯವಾಗಿ ನಡೆಯುವ ಚುನಾವಣಾ ಪ್ರಚಾರದಲ್ಲಿಯೂ ಈ ಸ್ಪರ್ಧೆಯ ಬಿಸಿ ಕಾಣಿಸುತ್ತಿದೆ. ಚಳವಳಿಯ ಪ್ರಮುಖ ನಾಯಕ ತಾನೇ ಆಗಿದ್ದೆ ಎಂಬ ಸುವೇಂದು ಹೇಳಿಕೆಯನ್ನು ಟಿಎಂಸಿ ಮುಖಂಡ ಅಬು ತಾಹಿರ್‌ ಖಂಡಿಸಿದ್ದಾರೆ.

‘ನಂದಿಗ್ರಾಮದ ಅಭಿವೃದ್ಧಿಗೆ ತಾನೇ ಕಾರಣ ಎಂದು ಅವರು (ಸುವೇಂದು) ಹೇಳಿದರೆ ಜನರು ಅವರನ್ನು ಓಡಿಸುತ್ತಾರೆ’ ಎಂದು ತಾಹಿರ್‌ ಹೇಳಿದ್ದಾರೆ.

ನಂದಿಗ್ರಾಮ ಚಳವಳಿಯ ಹುತಾತ್ಮರಿಗೆ ನಮನ ಸಲ್ಲಿಸಲು ಹೋಗುತ್ತಿದ್ದ ಸುವೇಂದು ಅವರಿದ್ದ ವಾಹನ ಸಾಲನ್ನು ಟಿಎಂಸಿಯ ನೂರಾರು ಕಾರ್ಯಕರ್ತರು ಸೋಮವಾರ ತಡೆದಿದ್ದರು. ವಿಶ್ವಾಸಾರ್ಹತೆ ಕಳೆದುಕೊಂಡ ‘ಮೀರ್‌ ಜಾಫರ್‌’ ಸುವೇಂದು ಅವರಿಗೆ ಹುತಾತ್ಮರಿಗೆ ನಮನ ಸಲ್ಲಿಸುವ ಹಕ್ಕಿಲ್ಲ ಎಂದು ಕಾರ್ಯಕರ್ತರು ಹೇಳಿದ್ದರು.

‘ನಂದಿಗ್ರಾಮದ ನಿಜವಾದ ವಂಚಕಿ ಮಮತಾ’ ಎಂದು ಸುವೇಂದು ಹೇಳಿದ್ದಾರೆ. ನಂದಿಗ್ರಾಮ ಗೋಲಿಬಾರ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ ಮಮತಾ ಬಡ್ತಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸುವೇಂದು ಅವರು ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದು ಶ್ರೀಪುರ ಸಮೀಪದ ದೈಯಾನ್‌ ಖಾನ್‌ಗೆ ಇಷ್ಟವಾಗಿಲ್ಲ. ಸುವೇಂದು ಅವರ ಕ್ರಮವು ನಂದಿಗ್ರಾಮದ ಜನರಿಗೆ ಮಾಡಿದ ಮೋಸ ಎಂಬುದು ಖಾನ್‌ ಅವರ ಅಭಿಪ್ರಾಯ. 2007ರ ಗೋಲಿಬಾರ್‌ನಲ್ಲಿ ಅವರ ಸಣ್ಣ ಮಗ ಬಲಿಯಾಗಿದ್ದಾರೆ.

ನಂದಿಗ್ರಾಮದ ಚಳವಳಿಯಲ್ಲಿ ಭಾಗವಹಿಸಿದವರು ಜಾತಿ ನೋಡಿರಲಿಲ್ಲ. ಆದರೆ, ಬಿಜೆಪಿಯವರು ಧ್ರುವೀಕರಣ ರಾಜಕಾರಣ ಮಾಡುತ್ತಿದ್ದಾರೆ. ಚಳವಳಿಯ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ ಎಂದು ಖಾನ್‌ ಅವರ ನೆರೆಮನೆಯ ವ್ಯಕ್ತಿ ಹೇಳುತ್ತಾರೆ.

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿರುವ ಇಬ್ಬರೂ ನಾಯಕರು ಪರಸ್ಪರರನ್ನು ಹೊರಗಿನವರು ಎಂದು ಆರೋಪಿಸುತ್ತಿದ್ದಾರೆ. ಮಮತಾ ಅವರನ್ನು ಹೊರಗಿನವರು ಎಂದು ಸುವೇಂದು ಹೇಳುತ್ತಿದ್ದಾರೆ. ತಾವು ಮಣ್ಣಿನ ಮಗ ಎಂಬುದು ಅವರ ಪ್ರತಿಪಾದನೆ. ‘ನಂದಿಗ್ರಾಮಕ್ಕೆ ಮೇದಿನಿಪುರದ ಮಣ್ಣಿನ ಮಗ ಬೇಕು’ ಎಂಬ ಪೋಸ್ಟರ್‌ಗಳನ್ನು ಬಿಜೆಪಿ ಎಲ್ಲೆಡೆ ಹಾಕಿದೆ. ‘ಗುಜರಾತ್‌ನಿಂದ ಬಂದವರು ಈಗ ಸ್ಥಳೀಯರಾಗಿದ್ದಾರೆ, ನಾನು ಹೊರಗಿನವಳಾಗಿದ್ದೇನೆ’ ಎನ್ನುವ ಮೂಲಕ ಮಮತಾ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT