ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಅಂತಿಮ ಹಂತದ ಮತದಾನ ಆರಂಭ, 35 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ

Last Updated 29 ಏಪ್ರಿಲ್ 2021, 2:39 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋವಿಡ್‌–19 ಎರಡನೇ ಅಲೆಯು ತೀವ್ರವಾಗಿರುವ ಮಧ್ಯೆಯೇ ಪಶ್ಚಿಮ ಬಂಗಾಳದಲ್ಲಿ ಎಂಟನೇ ಮತ್ತು ಅಂತಿಮ ಹಂತದ ಮತದಾನ ಗುರುವಾರ ಬೆಳಿಗ್ಗೆ 7ರಿಂದ ಆರಂಭವಾಗಿದೆ. ಬೆಳಗ್ಗಿನಿಂದಲೇ ಮತಗಟ್ಟೆಗಳ ಹೊರಗೆ ಮತದಾರರು ಸಾಲುಗಟ್ಟಿದ್ದಾರೆ.

ಮಾಲ್ದಾ ಜಿಲ್ಲೆಯ ಆರು, ಮುರ್ಶಿದಾಬಾದ್‌ ಮತ್ತು ಬಿರ್‌ಭೂಮ್‌ನ ತಲಾ 11 ಹಾಗೂ ಕೋಲ್ಕತ್ತದ ಏಳು ಕ್ಷೇತ್ರಗಳು ಸೇರಿದಂತೆ ಒಟ್ಟು 35 ವಿಧಾನಸಭಾ ಕ್ಷೇತ್ರಗಳ 11,860 ಮತಗಟ್ಟೆಗಳಲ್ಲಿ ಚುನಾವಣೆ ನಡೆಯುತ್ತಿದೆ.

ಬುಧವಾರ 24 ಗಂಟೆಗಳ ಅಂತರದಲ್ಲಿ ಪಶ್ಚಿಮ ಬಂಗಾಳದಲ್ಲಿ ಕೋವಿಡ್‌–19 ದೃಢಪಟ್ಟ 17,207 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 77 ಮಂದಿ ಸಾವಿಗೀಡಾಗಿದ್ದಾರೆ.

ಎಂಟನೇ ಹಂತದಲ್ಲಿ 283 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಸುಮಾರು 84.77 ಲಕ್ಷ ಮತದಾರರು ಅವರ ರಾಜಕೀಯ ಬದುಕನ್ನು ನಿರ್ಧರಿಸಲಿದ್ದಾರೆ.

ಏಪ್ರಿಲ್‌ 10ರಂದು ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಕೂಚ್‌ ಬಿಹಾರ್‌ನಲ್ಲಿ ನಡೆದ ಹಿಂಸಾಚಾರ ನಡೆದು ಐದು ಮಂದಿ ಸಾವಿಗೀಡಾದ ಘಟನೆ ನಡೆದಿತ್ತು. ಅನಂತರದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರೀಯ ಭದ್ರತಾ ಪಡೆಗಳ 641 ತುಕಡಿಗಳನ್ನು ಮತದಾನ ಪ್ರಕ್ರಿಯೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಸಂಜೆ 6:30ರ ವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಟಿಎಂಸಿಯ ಬಿರ್‌ಭೂಮ್‌ ಜಿಲ್ಲಾಧ್ಯಕ್ಷ ಅನುಬ್ರತ ಮಂಡಲ್‌ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ಹಲವು ದೂರುಗಳು ಬಂದಿರುವುದರಿಂದ, ಶುಕ್ರವಾರ ಬೆಳಿಗ್ಗೆ 7ರ ವರೆಗೂ ಅವರ ಮೇಲೆ ತೀವ್ರ ನಿಗಾವಹಿಸಲಾಗಿದೆ.

ಮಾರ್ಚ್‌ 27ರಿಂದ ಪಶ್ಚಿಮ ಬಂಗಾಳದ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಭಾನುವಾರ (ಮೇ 2ರಂದು) ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT