ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಬಂಧನ

ಪಶ್ಚಿಮ ಬಂಗಾಳ: ನಿಕಟವರ್ತಿ ಅರ್ಪಿತಾ ಮುಖರ್ಜಿ ಸಹ ಇ.ಡಿ ಕಸ್ಟಡಿಗೆ
Last Updated 23 ಜುಲೈ 2022, 22:44 IST
ಅಕ್ಷರ ಗಾತ್ರ

ಕೋಲ್ಕತ್ತ:ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಪಶ್ಚಿಮ ಬಂಗಾಳದ ಕೈಗಾರಿಕೆ ಹಾಗೂ ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಚಟರ್ಜಿ ಅವರನ್ನು ವಿಚಾರಣೆಗಾಗಿ ಎರಡು ದಿನ ಇ.ಡಿ ವಶಕ್ಕೆ ನೀಡಲಾಗಿದೆ.

ಸಂಜೆಯ ಹೊತ್ತಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಚಟರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.

ಚಟರ್ಜಿ ಅವರ ಬಂಧನದ ಬೆನ್ನಲ್ಲೇ, ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ. ಅರ್ಪಿತಾ ಅವರ ನಿವಾಸದ ಮೇಲೆ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದ ಇ.ಡಿ. ಅಧಿಕಾರಿಗಳು ಸುಮಾರು ₹20 ಕೋಟಿ ನಗದು, ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದ್ದರು.

ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚಟರ್ಜಿ ಅವರು ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಹಗರಣ ನಡೆದಿತ್ತು ಎಂದು ಆರೋಪಿಸಲಾಗಿದೆ. ಚಟರ್ಜಿ ಅವರನ್ನು ಶುಕ್ರವಾರದಿಂದಲೇ ವಿಚಾರಣೆಗೆ ಒಳಪಡಿಸಿದ್ದ ಇ.ಡಿ. ಅಧಿಕಾರಿಗಳು 26 ಗಂಟೆಗಳ ವಿಚಾರಣೆ ಬಳಿಕ ಶನಿವಾರ ಬಂಧಿಸಿದರು.

ಬಂಧನದ ನಂತರ ಅವರನ್ನು ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಬ್ಯಾಂಕ್‌ಶಾಲ ಕೋರ್ಟ್‌ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಚಟರ್ಜಿ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವ ಇ.ಡಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದರು.

‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಲು ನೀವು ಯತ್ನಿಸಿದಿರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಯತ್ನಿಸಿದೆ, ಆದರೆ ಸಂಪರ್ಕ ಸಾಧ್ಯವಾಗಲಿಲ್ಲ’ ಎಂದು ಚಟರ್ಜಿ ಅವರು ಉತ್ತರಿಸಿದರು.

ಗ್ರೂಪ್–ಸಿ, ಗ್ರೂಪ್–ಡಿ ಸಿಬ್ಬಂದಿ ನೇಮಕಾತಿ ಹಾಗೂ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಅವ್ಯವಹಾರ ಪ್ರಕರಣಣದ ಬಗ್ಗೆ ತನಿಖೆ ನಡೆಸುವಂತೆಸಿಬಿಐಗೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ ನೀಡಿತ್ತು. ತನಿಖೆ ನಡೆಸುವಂತೆ
ಪಶ್ಚಿಮ ಬಂಗಾಳ ಸ್ಕೂಲ್ ಸರ್ವೀಸ್ ಕಮಿಷನ್ (ಎಸ್‌ಎಸ್‌ಸಿ) ಶಿಫಾರಸು ಮಾಡಿತ್ತು.

2014–21ರ ಅವಧಿಯಲ್ಲಿ ರಾಜ್ಯದ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದಚಟರ್ಜಿ ಅವರನ್ನು ಸಿಬಿಐ ಅಧಿಕಾರಿಗಳು ಶಿಕ್ಷಕರ ನೇಮಕಾತಿ ಹಗರಣ ಕುರಿತಂತೆ ಇದೇ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ತನಿಖೆಗೆ ಒಳಪಡಿಸಿದ್ದರು.ಈ ಪ್ರಕರಣದಲ್ಲಿ ನಡೆದಿರಬಹುದಾದ ಹಣಅಕ್ರಮ ವರ್ಗಾವಣೆ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ.

ಬಿಜೆಪಿ ಟೀಕಾ ಪ್ರಹಾರ

ಸಚಿವ ಪಾರ್ಥ ಚಟರ್ಜಿ ಬಂಧನ ಕುರಿತಂತೆ ಮುಖ್ಯಮಂತ್ರಿ ಹೇಳಿಕೆ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ರಾಜ್ಯದ ಆಡಳಿತಾರೂಢ ಟಿಎಂಸಿ ಸರ್ಕಾರವೂ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ಸಚಿವರ ಬಂಧನವು ಸಾಬೀತುಪಡಿಸುತ್ತದೆ ಎಂದುಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷದಿಲೀಪ್ ಘೋಷ್ ಆರೋಪಿಸಿದ್ದಾರೆ.

‘ಭ್ರಷ್ಟಾಚಾರದಲ್ಲಿ ಟಿಎಂಸಿ ಸಚಿವರು ಹಾಗೂ ಮುಖಂಡರು ತೊಡಗಿಸಿಕೊಂಡಿರುವುದು ‘ಬಂಗಾಳದ ಅಭಿವೃದ್ಧಿ ಮಾದರಿ’ಗೆ ಉದಾಹರಣೆಯಾಗಿದೆ. ₹20 ಕೋಟಿ ನಗದು ಜಪ್ತಿ ಮಾಡಿರುವುದು ಭ್ರಷ್ಟಾಚಾರದ ತುಣುಕು ಮಾತ್ರ’ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸುಕಾಂತ್ ಮಜುಂದಾರ್ ಆರೋಪಿಸಿದ್ದಾರೆ.

ಚಟರ್ಜಿ ಬಂಧನಕ್ಕೆಪಶ್ಚಿಮ ಬಂಗಾಳದ ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಿಯಮದ ಪ್ರಕಾರ, ಲೋಕಸಭೆ ಅಥವಾ ವಿಧಾನಸಭೆಯ ಸದಸ್ಯರನ್ನು ಬಂಧಿಸುವ ಮುನ್ನ, ತನಿಖಾ ಸಂಸ್ಥೆಗಳು ಆ ಬಗ್ಗೆ ಸ್ಪೀಕರ್‌ಗೆ ಮಾಹಿತಿ ನೀಡಬೇಕು’ ಎಂದು ಹೇಳಿದ್ದಾರೆ.

ಚಟರ್ಜಿ ಬಂಧನದ ಬಗ್ಗೆ ಪಕ್ಷ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಶನಿವಾರ ಸಂಜೆ ತುರ್ತು ಸಭೆ ನಡೆಯಿತು. ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ತಕ್ಷಣಕ್ಕೆ ತೆಗೆಯದಿರಲು ಸಭೆ ನಿರ್ಧರಿಸಿತು.

ಚಟರ್ಜಿ ಅವರ ಜೊತೆ ಬಂಧನಕ್ಕೆ ಒಳಗಾಗಿರುವ ಅರ್ಪಿತಾ ಮುಖರ್ಜಿ ಅವರ ಜೊತೆ ಪಕ್ಷಕ್ಕೆ ಯಾವುದೇ ನಂಟಿಲ್ಲ ಎಂದು ವಕ್ತಾರ ಕುನಾಲ್ ಘೋಷ್ ಸ್ಪಷ್ಟಪಡಿಸಿದ್ದಾರೆ. ‘ಚಟರ್ಜಿ ಅವರು ಬಿಜೆಪಿಯಲ್ಲಿ ಇದ್ದಿದ್ದರೆ ಅವರನ್ನು ಯಾರೂ ಮುಟ್ಟುತ್ತಿರಲಿಲ್ಲ’ ಎಂದು ಟಿಎಂಸಿ ಹಿರಿಯ ನಾಯಕ ಫರ್ಹಾನ್ ಹಕೀಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT