ಭಾನುವಾರ, ಏಪ್ರಿಲ್ 11, 2021
30 °C

ಪಶ್ಚಿಮ ಬಂಗಾಳ: ಮೋದಿ–ಮಮತಾ ನೇರ ಹೋರಾಟ

ಸೌಮ್ಯ ದಾಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಎಂಬುದೇ ಈ ಬಾರಿಯ ಚುನಾವಣೆಯ ಕೇಂದ್ರ ಬಿಂದು. ಒಂದು ಕಾಲದಲ್ಲಿ ರಾಜ್ಯ ರಾಜಕಾರಣದ ಅಂಚಿನಲ್ಲಿರುವ ಪಕ್ಷ ಎಂದಷ್ಟೇ ಗುರುತಿಸಿಕೊಂಡಿದ್ದ ಬಿಜೆಪಿ, ಕಳೆದ ಲೋಕಸಭಾ ಚುನಾವಣೆಯಲ್ಲಿ 18 ಕ್ಷೇತ್ರಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷ ಎನಿಸಿಕೊಂಡಿದೆ. 

ಅದೇನೇ ಇದ್ದರೂ, ಬಿಜೆಪಿಯ ಎದುರಾಳಿಯಾಗಿ ಇರುವವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಎಂಬುದು ಗಮನಾರ್ಹ. 

ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಘೋಷಿಸಿಲ್ಲ. ಹಾಗಾಗಿ, ಈ ಬಾರಿಯ ಚುನಾವಣಾ ಹೋರಾಟವು ಪ್ರಧಾನಿ ನರೇಂದ್ರ ಮೋದಿ ಮತ್ತು ಮಮತಾ ಅವರ ನಡುವೆಯೇ ನಡೆಯಲಿದೆ. ಮಮತಾ ಅವರ ವರ್ಚಸ್ಸಿಗೆ ಸಾಟಿಯಾಗಿ ನಿಲ್ಲಬಲ್ಲ ನಾಯಕರು ಯಾರೂ ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಇಲ್ಲ ಎಂಬುದು ಆ ಪಕ್ಷದ ಚುನಾವಣಾ ಸಾಧನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. 

ಪೌರತ್ವ, ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ, ಒಳನುಸುಳುವಿಕೆ ಮತ್ತು ಅಭಿವೃದ್ಧಿ ಈ ಬಾರಿಯ ಚುನಾವಣೆಯಲ್ಲಿ ಪ್ರಧಾನವಾಗಿ ಪ್ರಸ್ತಾಪವಾಗಲಿರುವ ವಿಚಾರಗಳು. ಟಿಎಂಸಿಯ ಮುಖಂಡರು ಸರ್ಕಾರದ ಎಲ್ಲ ಯೋಜನೆಗಳಲ್ಲಿಯೂ ಲಂಚ ಪಡೆಯುತ್ತಿದ್ದಾರೆ (ಕಟ್ ಮನಿ) ಎಂಬುದನ್ನು ಮುಂದಿಟ್ಟು, ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಯತ್ನಿಸುತ್ತಿದೆ. ಆಡಳಿತ ಪಕ್ಷದ ‘ಸಿಂಡಿಕೇಟ್‌ಗಳು’ ಕಾರ್ಯನಿರ್ವಹಿಸುತ್ತಿವೆ, ಆಂಫನ್‌ ಚಂಡಮಾರುತದ ಬಳಿಕ ಕೇಂದ್ರವು ನೀಡಿದ ಅನುದಾನದ ದುರುಪಯೋಗವಾಗಿದೆ ಎಂಬುದು ಬಿಜೆಪಿಯ ಆರೋಪ. 

ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿ ಇರುವ ಗೊಂದಲ ಮತ್ತು ಕಾಯ್ದೆ ಜಾರಿಯಲ್ಲಿನ ವಿಳಂಬವನ್ನು ತಮ್ಮ ಪರವಾಗಿ ಬಳಸಿಕೊಳ್ಳಲು ಮಮತಾ ಮುಂದಾಗಿದ್ದಾರೆ. ಸಿಎಎಯ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಹಾಕಿದರೆ ಸಾಕು ಅಂಥವರು ತನ್ನಿಂತಾನೆ ‘ವಿದೇಶಿ’ಯರಾಗಿ ಗುರುತಿಸಿಕೊಳ್ಳಬೇಕಾಗುತ್ತದೆ ಎಂದು ಮಮತಾ ಹೇಳುತ್ತಿದ್ದಾರೆ. 

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಅನ್ನು ರಾಜ್ಯದಲ್ಲಿ ಜಾರಿ ಮಾಡಲು ಅವಕಾಶವೇ ಕೊಡುವುದಿಲ್ಲ ಎಂದು ಹೇಳುವ ಮೂಲಕ ನಿರಾಶ್ರಿತರು ಮತ್ತು ಅಲ್ಪಸಂಖ್ಯಾತರ ಬೆಂಬಲ ಪಡೆಯಲು ಮಮತಾ ಯತ್ನಿಸುತ್ತಿದ್ದಾರೆ. ಬಿಜೆಪಿಯವರೆಲ್ಲ ‘ಹೊರಗಿನವರು’ ಎಂದು ಮಮತಾ ಮತ್ತೆ ಮತ್ತೆ ಹೇಳುತ್ತಿದ್ದಾರೆ. ‘ಬಂಗಾಳಕ್ಕೆ ಬೇಕು ಬಂಗಾಳದ ಮಗಳು’ ಎಂಬ ಟಿಎಂಸಿಯ ಘೋಷಣೆಯೂ ಇದನ್ನೇ ಧ್ವನಿಸುತ್ತಿದೆ. ತಮ್ಮ ಸರ್ಕಾರ ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ಬಹಳ ಮುಂದಿದೆ ಎಂದು ಮಮತಾ ಹೇಳುತ್ತಿದ್ದಾರೆ.  

ಸಿಪಿಎಂ ನೇತೃತ್ವದ ಎಡರಂಗ ಮತ್ತು ಕಾಂಗ್ರೆಸ್‌ ಪಕ್ಷದ ಪ್ರಯತ್ನವು ನೆಲೆ ಕುಸಿಯುವಿಕೆಯನ್ನು ತಡೆಯುವುದಕ್ಕಷ್ಟೇ ಸೀಮಿತ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು