ಮಂಗಳವಾರ, ಜೂನ್ 15, 2021
21 °C

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಮೋಸದಾಟ: ಶಿವಸೇನಾ

ಪಿಟಿಐ‌ Updated:

ಅಕ್ಷರ ಗಾತ್ರ : | |

ಮುಂಬೈ: ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ರಾಜಕೀಯದ ರಕ್ತಸಿಕ್ತ ಮುಖವನ್ನು ಅನಾವರಣಗೊಳಿಸಿದೆ. ಈ ಘಟನೆಗಳು ಪ್ರಜಾಪ್ರಭುತ್ವದ ಬದಲಿಗೆ ಆಡಳಿತದ ಬಲವೇ ಮೇಲುಗೈ ಸಾಧಿಸಿದೆ ಎಂಬುದನ್ನು ತೋರಿಸುತ್ತಿವೆ ಎಂದು ಶಿವಸೇನಾ ಹೇಳಿದೆ. 

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಸರ್ಕಾರದ ಸಮಾನ ಜವಾಬ್ದಾರಿಯಾಗಿದೆ ಎಂದು ಶಿವಸೇನಾ ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಹೇಳಿದೆ.

‘ಪಶ್ಚಿಮ ಬಂಗಾಳದಲ್ಲಿ ನಿಖರವಾಗಿ ಏನು ನಡೆಯುತ್ತಿದೆ ಮತ್ತು ಈ ಬೆಳವಣಿಗೆಗಳ ಹಿಂದೆ ಯಾವ ಕಾಣದ ಕೈಗಳಿವೆ ? ಇವುಗಳ ಬಗ್ಗೆ ಸ್ಪಷ್ಟವಾಗಿ ತಿಳಿಯಬೇಕಿದೆ. ಬಿಜೆಪಿ ಚುನಾವಣೆಯಲ್ಲಿ ಸೋತಾಗಿನಿಂದಲೂ, ಅಲ್ಲಿ ಹಿಂಸಾಚಾರದ ಸುದ್ದಿಗಳು ಸ್ಫೋಟಗೊಳ್ಳುತ್ತಿವೆ. ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸುಳ್ಳು ಸುದ್ದಿ' ಎಂದು ಶಿವಸೇನಾ ಹೇಳಿದೆ.

‘ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ನಡೆದಿರುವ ಹಿಂಸಾಚಾರದಲ್ಲಿ 17 ಮಂದಿ ಸತ್ತಿದ್ದಾರೆ. ಅದರಲ್ಲಿ ಒಂಬತ್ತು ಮಂದಿಗೆ ಬಿಜೆಪಿ ಸಂಪರ್ಕದವರಾದರೆ, ಉಳಿದವರು ಟಿಎಂಸಿಗೆ ಸೇರಿದವರು. ಅಂದರೆ, ಈ ಘರ್ಷಣೆಯಲ್ಲಿ ಎರಡೂ ಪಕ್ಷದವರೂ ಸೇರಿದ್ದಾರೆ' ಎಂದು ಶಿವಸೇನಾ ಹೇಳಿದೆ.

‘ಪ್ರಧಾನಿ ನರೇಂದ್ರ ಮೋದಿಯವರು, ಪಶ್ಚಿಮ ಬಂಗಾಳದ ಪರಿಸ್ಥಿತಿ ಕುರಿತು ಅಲ್ಲಿನ ರಾಜ್ಯಪಾಲರಿಂದ ದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸುತ್ತಾರೆ. ಬಿಜೆಪಿ ಹಿರಿಯ ನಾಯಕರೊಬ್ಬರು, ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ಅವರನ್ನು ಹೊಣೆ ಮಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಹೈಕೋರ್ಟ್‌ ಮೊರೆ ಹೋಗುತ್ತಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಬಿಜೆಪಿ ಏನೊ ಮೋಸದಾಟ ನಡೆಸುತ್ತಿರುವುದು ತೋರುತ್ತಿದೆ‘ ಎಂದು ಶಿವಸೇನಾ ಶಂಕೆ ವ್ಯಕ್ತಪಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು