ಗುರುವಾರ , ಮೇ 6, 2021
32 °C

ಕೇಂದ್ರ ಪಡೆಗಳು ಬಿಜೆಪಿ ಪರ ಕೆಲಸ ನಿಲ್ಲಿಸುವವರೆಗೂ ಮಾತನಾಡುತ್ತೇನೆ: ಮಮತಾ

ಪಿಟಿಐ‌ Updated:

ಅಕ್ಷರ ಗಾತ್ರ : | |

ಜಮಲಾಪುರ (ಪಶ್ಚಿಮ ಬಂಗಾಳ): ಕೇಂದ್ರೀಯ ಪಡೆಗಳು ಮತದಾರರನ್ನು ಬೆದರಿಸುವ ಬಗ್ಗೆ ಮಾಡಿದ ಆರೋಪಗಳಿಗಾಗಿ ಭಾರತದ ಚುನಾವಣಾ ಆಯೋಗವು ನೀಡಿದ ನೋಟಿಸ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಜೆಪಿಗಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವವರೆಗೂ ಸಿಆರ್‌ಪಿಎಫ್ ಹಸ್ತಕ್ಷೇಪದ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇವೆ ಎಂದು ಶುಕ್ರವಾರ ಹೇಳಿದ್ದಾರೆ.

ಬಿಜೆಪಿಯ ಆದೇಶದ ಮೇರೆಗೆ ಇಸಿಐ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದ ಬ್ಯಾನರ್ಜಿ, ಮತದಾನದ ದಿನಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡುತ್ತಾರೆ, ಆದರೆ ಅವರು ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದ್ದಾರೆ ಎಂದು ಆಯೋಗ ಹೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಪುರ್ಬಾ ಬರ್ಧಮಾನ್‌ನ ಜಮಲಾಪುರದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಿಆರ್‌ಪಿಎಫ್‌ ಬಿಜೆಪಿಗೆ ಕೆಲಸ ಮಾಡುವುದನ್ನು ನಿಲ್ಲಿಸುವವರೆಗೂ ನಾನು ಹಸ್ತಕ್ಷೇಪದ ಬಗ್ಗೆ ಮಾತನಾಡುತ್ತೇನೆ. ಒಮ್ಮೆ ಅದು ಬಿಜೆಪಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಅದಕ್ಕೆ ನಮಸ್ಕರಿಸುತ್ತೇನೆ. ನಿಮ್ಮ (ಇಸಿಐ) ಶೋಕಾಸ್‌ ನೋಟಿಸ್‌ ಬಗ್ಗೆ ನಾನು ಹೆದರುವುದಿಲ್ಲ' ಎಂದು ತಿಳಿಸಿದ್ದಾರೆ.

'ಟಿಎಂಸಿ ಹೇಳುವುದನ್ನು ಚುನಾವಣಾ ಆಯೋಗ ಕೇಳುವುದಿಲ್ಲ ಆದರೆ ಬಿಜೆಪಿಯವರು ಏನು ಹೇಳುತ್ತಾರೋ ಅದನ್ನು ಅನುಸರಿಸುತ್ತಿದೆ' ಎಂದು ಆರೋಪಿಸಿದ ಅವರು, ಮತದಾನದ ದಿನಗಳಲ್ಲಿ ನಾನು ಕೂಡ ಪ್ರಚಾರ ಮಾಡುತ್ತೇನೆ ಏಕೆಂದರೆ ಪ್ರಧಾನಿ ಮೋದಿ ಕೂಡ ಹಾಗೆ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ವೇಳೆಯಲ್ಲಿಯೇ ನೀವು (ಪ್ರಧಾನಿ) 'ಪರಿಕ್ಷಾ ಪೆ ಚರ್ಚಾ' ಕಾರ್ಯಕ್ರಮವನ್ನು ಏಕೆ ನಡೆಸುತ್ತೀರಿ? ಇದು ಎಂಸಿಸಿಯ ಉಲ್ಲಂಘನೆಯಲ್ಲವೇ?' ಎಂದು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ವಿರುದ್ಧದ 'ಸಂಪೂರ್ಣ ಸುಳ್ಳು, ಪ್ರಚೋದನಕಾರಿ ಮತ್ತು ಅಸಂಬದ್ಧ ಹೇಳಿಕೆಗಳಿಗಾಗಿ' ಚುನಾವಣಾ ಆಯೋಗ ಗುರುವಾರ ರಾತ್ರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ನೋಟಿಸ್ ನೀಡಿದೆ. ಅವರ ಹೇಳಿಕೆಗಳು ಸಿಬ್ಬಂದಿಯ ಸ್ಥೈರ್ಯಗೆಡಿಸುವಂತವುಗಳಾಗಿವೆ ಎಂದು ಹೇಳಿದ್ದು, ಶನಿವಾರದೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಮಮತಾರನ್ನು ಕೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು