ಭಾನುವಾರ, ನವೆಂಬರ್ 1, 2020
19 °C
14 ತಿಂಗಳ ಗೃಹಬಂಧನದಿಂದ ಬಿಡುಗಡೆಗೊಂಡ ನಂತರ ಹೇಳಿಕೆ

370ನೇ ವಿಧಿ ಮರುಸ್ಥಾಪನೆಗಾಗಿ ಹೋರಾಟ: ಮೆಹಬೂಬಾ ಮುಫ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಈ ಮೊದಲಿನ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸುವೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಗುಡುಗಿದ್ದಾರೆ.

‘ಕಳೆದ ವರ್ಷ ಆಗಸ್ಟ್‌ 5ರಂದು ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಯಿತು.  ಅಸಾಂವಿಧಾನಿಕ, ಕಾನೂನುಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳ ಮೂಲಕ ನಮ್ಮಿಂದ ಕಸಿದುಕೊಂಡಿರುವ ಈ ಸ್ಥಾನಮಾನವನ್ನು ಮರಳಿ ಪಡೆಯುತ್ತೇವೆ ಎಂಬ ಶಪಥವನ್ನು ನಾವೆಲ್ಲರೂ ಮಾಡಬೇಕಾಗಿದೆ’ ಎಂದು ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಧ್ವನಿ ಸಂದೇಶದಲ್ಲಿ ಹೇಳಿದ್ದಾರೆ.

‘ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಹಗಲು ದರೋಡೆಯೇ ಸರಿ. ಈ ಸ್ಥಾನಮಾನವನ್ನು ಮರಳಿ ಪಡೆಯುವ ದಾರಿ ಸುಗಮವೇನಲ್ಲ. ಅಚಲ ಹಾಗೂ ದೃಢನಿಶ್ಚಯದಿಂದ ಹೋರಾಡಿದರೆ ನಮ್ಮ ಗುರಿ ಸಾಧಿಸಲು ಸಾಧ್ಯ’ ಎಂದಿದ್ದಾರೆ.

‘ನನ್ನನ್ನೇನೋ ಈಗ ಬಿಡುಗಡೆ ಮಾಡಲಾಗಿದೆ. ಆದರೆ, ದೇಶದ ವಿವಿಧ ಜೈಲುಗಳಲ್ಲಿ ಇರಿಸಲಾಗಿರುವ ಕಾಶ್ಮೀರದ ಜನರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಸಂದರ್ಭದಲ್ಲಿ, ಮೆಹಬೂಬಾ ಅವರನ್ನು ಮುಂಜಾಗ್ರತಾ ಕ್ರಮವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ನಂತರ, ಕಳೆದ ಫೆಬ್ರುವರಿ 6ರಂದು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. 14 ತಿಂಗಳ ಬಳಿಕ ಅವರನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಲಾಯಿತು.

ಅವರಿಗೆ ಗೃಹಬಂಧನ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಗುರುವಾರ ಕೈಗೆತ್ತಿಕೊಳ್ಳಲಿದೆ. ಅರ್ಜಿಯ ವಿಚಾರಣೆ ನಡೆಯುವ ಎರಡು ದಿನಗಳ ಮುನ್ನವೇ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡಿರುವುದು ಗಮನಾರ್ಹ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು